ವಕೀಲರ ಕರ್ತವ್ಯಕ್ಕೆ ಅಡ್ಡಿಗೆ ಮೂರು ವರ್ಷ ಜೈಲು ಶಿಕ್ಷೆ
ಬೆಳಗಾವಿ: ವಕೀಲರಿಗೆ ರಕ್ಷಣೆ ನೀಡುವ ಸಲುವಾಗಿ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಮಸೂದೆ-2023ನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಬೆದರಿಕೆ, ಅಡ್ಡಿ, ಕಿರುಕುಳ ಅಥವಾ ಅವರೊಂದಿಗೆ ಅನುಚಿತ ಹಸ್ತಕ್ಷೇಪ ರಹಿತವಾಗಿ ತಮ್ಮ ಎಲ್ಲ ವೃತ್ತಿಪರ ಪ್ರಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವುದು, ದೇಶ-ವಿದೇಶಗಳಲ್ಲಿ ಮುಕ್ತವಾಗಿ ಪ್ರಯಾಣಿಸುವುದು, ಅವರ ಕಕ್ಷಿದಾರರೊಂದಿಗೆ ಸಮಾಲೋಚಿಸಲು ಅನುಕೂಲ ಆಗುವಂತೆ ಹಾಗೂ ಯಾವುದೇ ಭಯ ಅಥವಾ ಬಾಹ್ಯ ಪ್ರಭಾವಕ್ಕೆ ಒಳಗಾಗದೆ ತಮ್ಮ ವೃತ್ತಿಪರ ಸೇವೆ ಸಲ್ಲಿಸುವುದಕ್ಕಾಗಿ ಹಾಗೂ ಅದಕ್ಕೆ ಸಂಬಂಧಿಸಿದ ಪ್ರಾಸಂಗಿಕ ವಿಷಯಗಳಿಗೆ ಅವರ ಮೇಲಿನ ಹಿಂಸೆಯನ್ನು ನಿಷೇಧಿಸುವುದು ಮತ್ತು ಅವರಿಗೆ ರಕ್ಷಣೆ ನೀಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.
ವಕೀಲರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ 6 ತಿಂಗಳಿಂದ 3 ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ವಾಸ ಅಥವಾ 1 ಲಕ್ಷ ರೂ.ವರೆಗೆ ವಿಸ್ತರಿಸಬಹುದಾದ ದಂಡಕ್ಕೆ ಒಳಗಾಗಬೇಕಾಗುತ್ತದೆ ಎಂಬುದನ್ನು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
ಎಸ್‌ಸಿಎಸ್‌ಪಿ, ಟಿಎಸ್‌ಪಿ ತಿದ್ದುಪಡಿ ಮಸೂದೆ
ಪ.ಜಾತಿ ಮತ್ತು ವರ್ಗದವರಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಡಿ ಮೀಸಲಿಟ್ಟಿದ್ದ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳಲು ಅನುಕೂಲ ಆಗುವಂತೆ ಕರ್ನಾಟಕ ಅನುಸೂಚಿತ ಜಾತಿಗಳ ಉಪಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ (ಹಂಚಿಕೆ ಮಾಡಬಹುದಾದ ಆಯವ್ಯಯ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) (ತಿದ್ದುಪಡಿ) ಮಸೂದೆ-2023 ಅನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಇದಕ್ಕಾಗಿಯೇ ಇರುವ ರಾಜ್ಯ ಪರಿಷತ್ತಿನ ಪದನಿಮಿತ್ತ ಸದಸ್ಯರಾಗಿ ಉಪಮುಖ್ಯಮಂತ್ರಿ, ಬುಡಕಟ್ಟು ಕಲ್ಯಾಣ ಸಚಿವರನ್ನು ಸೇರಿಸಲು ಅವಕಾಶ ಕಲ್ಪಿಸಲಾಗಿದೆ.