ಉಡುಪಿ: ಕಲ್ಲಪ್ಪ ಪಕೀರಪ್ಪಪಡಿಶ್ಯಾವಿಗೆ “ಜನಪದ ವೈದ್ಯ ಸಿರಿ” ಪ್ರಶಸ್ತಿ ಪ್ರದಾನ
ಉಡುಪಿ, ಡಿ.11: ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ವತಿಯಿಂದ ನೀಡುವ ರಾಜ್ಯಮಟ್ಟದ ಜನಪದ ವೈದ್ಯಸಿರಿ ಪ್ರಶಸ್ತಿಯನ್ನು ಧಾರವಾಡ ಜಿಲ್ಲೆಯ ಜಾನಪದ ವೈದ್ಯಶ್ರೀ ಕಲ್ಲಪ್ಪ ಪಕೀರಪ್ಪಪಡಿಶ್ಯಾವಿಗೆ ಅವರಿಗೆ ಸೋಮವಾರ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಲ್ಲಪ್ಪಪಕೀರಪ್ಪ ಪಡಿಶ್ಯಾವಿಗೆ, ಮುಂದಿನ ದಿನಗಳಲ್ಲಿ ಆಯುರ್ವೇದಕ್ಕೆ ಹೆಚ್ಚಿನ ಬೇಡಿಕೆ ಬರುವುದರಿಂದ ಆಯುರ್ವೇದ ವಿದ್ಯಾರ್ಥಿಗಳು ಆಯುರ್ವೇದದಲ್ಲಿ ಅಪಾರ ನಂಬಿಕೆ ಇಡಬೇಕು. ಇದರಿಂದ ಯಶಸ್ವಿ ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮೈಸೂರು ಸರಕಾರಿ ಆಯುರ್ವೇದ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ವಹಿಸಿದ್ದರು.
ನಿವೃತ್ತ ಪ್ರಾಂಶುಪಾಲ ಡಾ.ಕೆ.ಆರ್.ರಾಮಚಂದ್ರ, ನಿವೃತ್ತ ಪ್ರಾಧ್ಯಾಪಕ ಡಾ.ಜಿ.ಎಂ.ಕಂಠಿ, ಆಡಳಿತ ವಿಭಾಗ ಮುಖ್ಯಸ್ಥ ಡಾ.ವೀರಕುಮಾರ ಕೆ., ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ.ಶ್ರೀಲತಾ ಕಾಮತ್, ಸ್ನಾತಕ ವಿಭಾಗದ ಡೀನ್ ಡಾ.ರಜನೀಶ್ ವಿ.ಗಿರಿ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು.
ಜನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ರವಿಕೃಷ್ಣ ಎಸ್. ಸ್ವಾಗತಿಸಿದರು. ಸದಸ್ಯ ಡಾ.ರವಿ ಕೆ.ವಿ. ವೈದ್ಯರನ್ನು ಪರಿಚಯಿಸಿದರು. ಡಾ. ಅರ್ಹಂತ್ಕುಮಾರ್ ಸನ್ಮಾನ ಪತ್ರ ವಾಚಿಸಿದರು. ಸ್ನಾತಕೋತ್ತರ ವಿಭಾಗದ ಡೀನ್ ಡಾ.ಅಶೋಕ್ ಕುಮಾರ್ ಬಿ.ಎನ್. ವಂದಿಸಿದರು. ಡಾ.ಕಾವ್ಯ ಮತ್ತು ಡಾ.ರಶ್ಮಿ ಎನ್.ಆರ್. ಕಾರ್ಯಕ್ರಮ ನಿರೂಪಿಸಿದರು.