ಲಂಚ ಪಡೆದ ಆರೋಪ- ಕೋಟ ಎಸ್ಐ ಅಮಾನತು

ಕೋಟ, ಡಿ.11: ಕೋಟ ಠಾಣೆ ಉಪನಿರೀಕ್ಷಕರಾಗಿದ್ದು, ಪ್ರಸ್ತುತ ಒಒಡಿ ಮೇಲೆ ಕಾರ್ಕಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಂಭುಲಿಂಗಯ್ಯ ಅವರನ್ನು ಲಂಚ ಪ್ರಕರಣ ಆರೋಪಕ್ಕೆ ಸಂಬಂಧಿಸಿ ಅಮಾನತುಗೊಳಿಸಲಾಗಿದೆ.

ಕೋಟ ಕಾಲೇಜಿನ ಆಡಳಿತ ಮಂಡಳಿಯೊಂದರ ಗಲಾಟೆಗೆ ಸಂಬಂಧಿಸಿದಂತೆ ದೂರುದಾರರಿಂದ ಲಂಚ ಪಡೆದಿರುವುದಾಗಿ ಸಾಮಾಜಿಕ ಕಾರ್ಯಕರ್ತರೋರ್ವರು ವೀಡಿಯೋ ಮೂಲಕ ದೂರಿದ್ದರು. ಈ ಕುರಿತು ತನಿಖೆ ನಡೆಸಿ ಅಮಾನತುಗೊಳಿಸಲಾಗಿದೆ ಎಂದು ಉಡುಪಿ ಎಸ್.ಪಿ. ಡಾ.ಕೆ.ಅರುಣ್ ಕುಮಾರ್ ತಿಳಿಸಿದ್ದಾರೆ.

ಅಚ್ಲಾಡಿಯ ಖಾಸಗಿ ನರ್ಸಿಂಗ್ ಕಾಲೇಜಿನ ಆಡಳಿತ ಮಂಡಳಿಯೊಳಗೆ ಗಲಾಟೆಗೆ ಸಂಬಂಧಿಸಿದಂತೆ ಮಧು ಭಾಸ್ಕರ್ ಹಾಗೂ ಮಹಿಮಾ ಮಧು ಭಾಸ್ಕರ್ ಅವರು ಪರಸ್ಪರ ದೂರು ದಾಖಲಿಸಿಕೊಂಡಿದ್ದರು. ಈ ವಿಚಾರವಾಗಿ ಮಧು ಭಾಸ್ಕರ್ ವಿರುದ್ಧ ದೂರು ದಾಖಲಿಸಲು ಹಾಗೂ ಮಹಿಮಾ ವಿರುದ್ಧದ ದೂರಿಗೆ ಬಿ.ರಿಪೋರ್ಟ್ ನೀಡುವುದಾಗಿ ಆಗ ಠಾಣಾಧಿಕಾರಿಯಾಗಿದ್ದ ಶಂಭು ಲಿಂಗಯ್ಯ ಲಂಚ ಪಡೆದಿದ್ದರು.

ಅದರಲ್ಲೂ ಹತ್ತಿರದ ಸಂಬಂಧಿಯೋರ್ವರ ಖಾತೆಗೆ ಸ್ವಲ್ಪ ಮೊತ್ತದ ಹಣ ವರ್ಗಾಯಿಸಿಕೊಂಡಿದ್ದಾರೆ. ಈ ಬಗ್ಗೆ ದಾಖಲೆಗಳನ್ನು ನೀಡಲು ಸಿದ್ಧವಿದ್ದು ಠಾಣಾಧಿಕಾರಿಗಳನ್ನು ತತ್‌ಕ್ಷಣ ಅಮಾನತುಗೊಳಿಸ ಬೇಕು ಎಂದು ಮಾನವ ಹಕ್ಕುಗಳ ಸಮಿತಿಯ ರಾಜ್ಯ ಪ್ರಮುಖ ಎನ್ನಲಾದ ದಿನೇಶ್ ಗಾಣಿಗ ಕೋಟ ವೀಡಿಯೋ ಮೂಲಕ ಎಸ್.ಪಿ. ಅವರನ್ನು ವಿನಂತಿಸಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್‌ ಆಗಿತ್ತು.

ಶಂಭುಲಿಂಗಯ್ಯ ಅವರನ್ನು ಈ ಹಿಂದೆ ಅಶಿಸ್ತಿನ ಕಾರಣಕ್ಕೆ ಒಒಡಿ ಮೇಲೆ ಕೋಟದಿಂದ ಕಾರ್ಕಳಕ್ಕೆ ನಿಯೋಜಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!