ಪರ್ಯಾಯ ಮಹೋತ್ಸವ ನಗರಸಭೆಯಿಂದ 5 ಕೋಟಿ ವೆಚ್ಚದಲ್ಲಿ ನಗರದ ಮೂಲ ಸೌಕರ್ಯ ಅಭಿವೃದ್ಧಿ: ಯಶ್ಪಾಲ್ ಸುವರ್ಣ
ಉಡುಪಿ: ಜನವರಿಯಲ್ಲಿ ನಡೆಯುವ ಉಡುಪಿ ಪರ್ಯಾಯ ಮಹೋತ್ಸವ ಹಿನ್ನೆಲೆಯಲ್ಲಿ ಉಡುಪಿ ನಗರಸಭೆ ವತಿಯಿಂದ ರೂ. 5 ಕೋಟಿ ವೆಚ್ಚದಲ್ಲಿ ಉಡುಪಿ ನಗರದ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಳ್ಳಲಿದೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.
ಪ್ರತಿ ಬಾರಿಯ ಪರ್ಯಾಯ ಮಹೋತ್ಸವದಂತೆ ಪೂರ್ವಭಾವಿಯಾಗಿ ನಗರದ ಪ್ರಮುಖ ರಸ್ತೆ ಅಭಿವೃದ್ಧಿ, ಸ್ವಚ್ಚತೆ, ಚರಂಡಿ, ದಾರಿ ದೀಪ, ಕಿನ್ನಿಮುಲ್ಕಿ ಗೋಪುರ ಹಾಗೂ ಸರಕಾರಿ ಕಟ್ಟಡಗಳಿಗೆ ಪೈಂಟಿಂಗ್, ದೀಪಾಲಂಕಾರ ಸಹಿತ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ನಡೆಸಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಅತೀ ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.
ಉಡುಪಿಯ ಪ್ರಮುಖ ರಸ್ತೆಗಳಾದ ಅಜ್ಜರಕಾಡು ವಾರ್ಡಿನ ಬ್ರಹ್ಮಗಿರಿ ಸರ್ಕಲ್ ನಿಂದ ಪುರಭವನ ರಸ್ತೆ, ಕುಂಜಿಬೆಟ್ಟು ವಾರ್ಡ್ ಕಟ್ಟೆ ಆಚಾರ್ಯ ಮಾರ್ಗ, ಕಿನ್ನಿಮುಲ್ಕಿ ವಾರ್ಡ್ ಬಿಗ್ ಬಜಾರ್ ಎದುರು ರಸ್ತೆ, ಬೈಲೂರು ವಾರ್ಡಿನ ಅಮ್ಮಣ್ಣಿ ರಮಣ ಶೆಟ್ಟಿ ಹಾಲ್ ಮುಂಭಾಗದ ರಸ್ತೆ ಅಗಲೀಕರಣ, ಬೈಲೂರು ವಾರ್ಡಿನ ಶಾರದಾಂಬ ದ್ವಾರದಿಂದ ಹಳೇ ಸ್ಟೇಟ್ ಬ್ಯಾಂಕ್ ವರೆಗೆ ರಸ್ತೆ ಅಗಲೀಕರಣ, ಬೀಡಿನಗುಡ್ಡೆ ಜಂಕ್ಷನ್ ನಿಂದ ಚಿಟ್ಪಾಡಿ ಜಂಕ್ಷನ್ ವರೆಗೆ ರಸ್ತೆ ಮರು ಡಾಮರೀಕರಣ ಹಾಗೂ ಚರಂಡಿ ರಚನೆ ಸಹಿತ ವಿವಿಧ ಬಹುದಿನಗಳ ಬೇಡಿಕೆಯ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗಿದೆ.
ಈಗಾಗಲೇ ರಾಜ್ಯ ಸರಕಾರದಿಂದ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಅನುದಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದು, ಕನಿಷ್ಠ 10 ಕೋಟಿ ಅನುದಾನ ಮಂಜೂರು ಮಾಡುವ ನಿರೀಕ್ಷೆಯಿದೆ ಎಂದು ಯಶ್ ಪಾಲ್ ಸುವರ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.