ಕೊರೋನಾ ಸೋಂಕಿತ 50 ಗರ್ಭಿಣಿಯರಿಗೆ ಯಶಸ್ವೀಯಾಗಿ ಹೆರಿಗೆ ಮಾಡಿಸಿದ ಡಾ.ಟಿಎಂಎ ಪೈ ಆಸ್ಪತ್ರೆ

ಉಡುಪಿ, ಅ.8: ಕೋವಿಡ್ -19 ಸೋಂಕಿನಿಂದ ಬಳಲುತ್ತಿರುವ 50 ಗರ್ಭಿಣಿ ಮಹಿಳೆಯರ ಯಶಸ್ವಿ ಹೆರಿಗೆಗಳನ್ನು ನಡೆಸುವಲ್ಲಿ ಆಸ್ಪತ್ರೆಯು ಮಹತ್ವದ ಮೈಲಿಗಲ್ಲು ಸಾಧಿಸಿದೆ ಎಂದು ಉಡುಪಿಯ ಡಾ. ಟಿ ಎಂ ಎ ಪೈ ಆಸ್ಪತ್ರೆಯು ಪ್ರಕಟಣೆಯಲ್ಲಿ ತಿಳಿಸಿದೆ. ಮೇ 27 ರಿಂದ ಅ.03 ರವರೆಗೆ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗವು 50 ಹೆರಿಗೆಗಳನ್ನು ನಡೆಸಿದೆ.

ಇತ್ತೀಚಿನ ಅಧ್ಯಯನಗಳಿಂದ ನವಜಾತ ಶಿಶುಗಳಿಗೆ ಕೋವಿಡ್ -19 ಸೋಂಕಿನ ಅಪಾಯವಾಗುವ ಸಂಭವಗಳು ಇರುವುದರಿಂದ, ಶಿಶುವನ್ನು ಕೋವಿಡ್ -19 ರಿಂದ ಮುಕ್ತಗೊಳಿಸಲು ಆಸ್ಪತ್ರೆಯು ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ತಾಯಿ ಮತ್ತು ಮಗು ಆರೋಗ್ಯವನ್ನಾಗಿರಿಸಲು ಮತ್ತು ಕೋವಿಡ್ ಮುಕ್ತಗೊಳಿಸಲು ಈ ಕ್ರಮವನ್ನು ಕೈಗೊಂಡಿತ್ತು. ಇಡೀ ಪ್ರಪಂಚವನ್ನು ಕೋವಿಡ್ -19 ಆವರಿಸಿಕೊಂಡಿರುವ ಈ ಸಂದರ್ಭದಲ್ಲಿ, ಆಸ್ಪತ್ರೆಯು 50 ಆರೋಗ್ಯವಂತ ಶಿಶುಗಳನ್ನು ಯಾವುದೇ ತೊಂದರೆಗಳಿಲ್ಲದೆ ಜನಿಸಲು ಸಹಾಯ ಮಾಡಿದೆ.


ಇದರ ಬಗ್ಗೆ ಮಾತನಾಡಿದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ ಪ್ರಾಧ್ಯಾಪಕರಾದ ಡಾ. ಶಶಿಕಲಾ ಕೆ ಭಟ್ “ಎಲ್ಲಾ ಹೆರಿಗೆಗಳು ತ್ರಾಸದಾಯಕವಾಗಿರಲಿಲ್ಲ. ಹೊಸದಾಗಿ ಹುಟ್ಟಿದ ಶಿಶುಗಳನ್ನು ಮಕ್ಕಳ ವಿಭಾಗವು ಜಾಗರೂಕತೆಯಿಂದ ನೋಡಿಕೊಳ್ಳುತ್ತಿತ್ತು. ನವಜಾತ ಶಿಶುವಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಾಯಂದಿರು ಮತ್ತು ನವಜಾತ ಶಿಶುಗಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ವಿಶೇಷ ಕಾಳಜಿ ನೀಡಲಾಗುತ್ತಿತ್ತು. ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಯಾವುದೇ ಕೋವಿಡ್ -19 ತೊಡಕುಗಳನ್ನು ರೋಗಿಗಳು ಎದುರಿಸಲಿಲ್ಲ ಎಂದು ನಾವು ಖಚಿತಪಡಿಸಿದ್ದೆವು” ಎಂದು ಹೇಳಿದ್ದಾರೆ.

ಇದರ ಬಗ್ಗೆ ಡಾ. ಟಿ ಎಂ ಎ ಪೈ ಆಸ್ಪತ್ರೆ ಉಡುಪಿಯ ವೈದ್ಯಕೀಯ ಅಧೀಕ್ಷಕರಾದ ಡಾ. ಶಶಿಕಿರಣ ಉಮಾಕಾಂತ್ ಅವರು “ತಾಯಿ ಮತ್ತು ಮಗು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಈ ಕೋವಿಡ್ ಸೋಂಕಿನ ಸಮಯದಲ್ಲಿ ಹೆಚ್ಚುವರಿ ಪ್ರಯತ್ನಗಳು ಬೇಕಾಗುತ್ತವೆ. ಕಟ್ಟುನಿಟ್ಟಾದ ಸೋಂಕು ನಿಯಂತ್ರಣ ಮುನ್ನೆಚ್ಚರಿಕೆಗಳು ಮತ್ತು ರೋಗಿಗಳ ಆರೈಕೆ ನಿಯಮಾವಳಿಗಳೊಂದಿಗೆ ವೈದ್ಯರು ಮತ್ತು ಸಿಬ್ಬಂದಿಗಳು ಎಲ್ಲಾ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆಯನ್ನು ಯಶಸ್ವೀಯಾಗಿ ನಡೆಸಿದ್ದಾರೆ.

ಕೋವಿಡ್ -19 ನಿಯಮಾವಳಿಗಳ ಪ್ರಕಾರ ಎಲ್ಲಾ ರೋಗಿಗಳನ್ನು ಸಂಪೂರ್ಣವಾಗಿ ಮೌಲ್ಯಮಾಪನ ಮಾಡಲಾಗಿದೆ. ಉಡುಪಿ ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರದ ಸಕ್ರಿಯ ಬೆಂಬಲದೊಂದಿಗೆ, ನಾವು ಎಲ್ಲಾ ಸಕಾರಾತ್ಮಕ ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ಉಡುಪಿಯ ಡಾ. ಟಿ ಎಂ ಎ ಪೈ ಆಸ್ಪತ್ರೆಯನ್ನು ಅರ್ಪಿಸಿದ್ದೇವೆ” ಎಂದು ಹೇಳಿದ್ದಾರೆ.


ಉಡುಪಿಯ ಡಾ. ಟಿ ಎಂ ಎ ಪೈ ಆಸ್ಪತ್ರೆಯು 150 ಹಾಸಿಗೆಗಳ ಸಾಮರ್ಥ್ಯವುಳ್ಳ ಆಸ್ಪತ್ರೆಯಾಗಿದ್ದು, ಕೋವಿಡ್ -19 ಚಿಕಿತ್ಸೆಗೆ ಮೀಸಲಿಡಲಾಗಿದೆ. ಇದರಲ್ಲಿ 8 ತೀವ್ರ ನಿಗಾ ಘಟಕಗಳು, 10 ಎಚ್‌ಡಿಯು (HDU) ಹಾಸಿಗೆಗಳು, 50 ಹಾಸಿಗೆಗಳ ಖಾಸಗಿ ಕೊಠಡಿಗಳು ಮತ್ತು 82 ಸಾಮಾನ್ಯ ವಾರ್ಡಿನ ಹಾಸಿಗೆಗಳ ಸೌಲಭ್ಯವಿದೆ.

Leave a Reply

Your email address will not be published. Required fields are marked *

error: Content is protected !!