ಹಳೆಯ ಸಬ್ ಜೈಲು ಕಟ್ಟಡ ಉಳಿಸಿಕೊಂಡೇ ನಗರಸಭೆ ಕಚೇರಿ ನಿರ್ಮಾಣ- ರಾಯಪ್ಪ
ಉಡುಪಿ, ಡಿ.9: ಐತಿಹಾಸಿಕ ಸ್ಮಾರಕವಾಗಿರುವ ಉಡುಪಿಯ ಹಳೆಯ ಸಬ್ ಜೈಲು ಕಟ್ಟಡವನ್ನು ಉಳಿಸಿಕೊಂಡೇ ಉಡುಪಿ ನಗರಸಭೆ ಕಚೇರಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದು ಉಡುಪಿ ನಗರಸಭೆಯ ಪೌರಾಯುಕ್ತ ರಾಯಪ್ಪ ಹೇಳಿದ್ದಾರೆ.
ಇಂಡಿಯನ್ ನೇಶನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೇಜ್ ಸಂಸ್ಥೆಯ ಮಂಗಳೂರು ವಿಭಾಗ ಹಾಗೂ ಉಡುಪಿ ಮಣಿಪಾಲ ಉಪವಿಭಾಗದೊಂದಿಗೆ ಉಡುಪಿ ಜಂಗಮ ಮಠದ ಚಿತ್ರಕಲಾ ಮಂದಿರ ಕಲಾ ಶಾಲೆಯ ಸಹಯೋಗದಲ್ಲಿ ಕಲಾಶಾಲೆಯ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ಐತಿಹಾಸಿಕ ಸ್ಮಾರಕ ಉಡುಪಿಯ ಸಬ್‌ಜೈಲ್ ಕುರಿತ ವಾಸ್ತುಶಿಲ್ಪದ ದಾಖಲಾತಿಯ ಪ್ರದರ್ಶನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ಬೆಳೆಯುತ್ತಿರುವ ನಗರವಾಗುತ್ತಿದ್ದು, ವಾಹನ ದಟ್ಟಣೆಗಳು ಹೆಚ್ಚಾಗುತ್ತಿದೆ. ಪಾರ್ಕಿಂಗ್ ಇಲ್ಲಿನ ದೊಡ್ಡ ಸಮಸ್ಯೆಯಾಗಿದೆ. ಉಡುಪಿ ನಗರಸಭೆ ಕಚೇರಿಗೆ ಪ್ರತಿದಿನ 5-6ಸಾವಿರ ಮಂದಿ ಭೇಟಿ ನೀಡುತ್ತಿರುತ್ತಾರೆ. ಇವರ ವಾಹನ ಗಳ ಪಾರ್ಕ್ ಮಾಡಲು ಜಾಗವೇ ಇಲ್ಲ. ಆದುದರಿಂದ ನಗರಸಭೆ ಕಚೇರಿಯನ್ನು ಹಳೆಯ ತಾಲೂಕು ಕಚೇರಿ ಇದ್ದ 96 ಸೆಂಟ್ಸ್ ಜಾಗದಲ್ಲಿ ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ ಎಂದರು.
ಹಳೆಯ ಸಬ್‌ಜೈಲು ಉಳಿಸಲು ಪರಿಣಿತರ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಗುವುದು. ಈ ಕಟ್ಟಡಕ್ಕೆ ನಮ್ಮ ಯಾವುದೇ ವಿರೋಧ ಇಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ವಾಸ್ತುಶಿಲ್ಪಿಗಳ ಸಲಹೆಯಂತೆ ನಗರ ಸಭೆ ಕಟ್ಟಡವನ್ನು ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.
ಚಿತ್ರಕಲಾ ಮಂದಿರ ಕಲಾಶಾಲೆಯ ನಿರ್ದೇಶಕ ಡಾ. ಯು.ಸಿ.ನಿರಂಜನ್ ಮುಖ್ಯ ಅತಿಥಿಯಾಗಿದ್ದರು. ಇಂಟ್ಯಾಕ್ ಮಂಗಳೂರು ವಿಭಾಗದ ಸಂಚಾಲಕ, ಆರ್ಕಿಟೆಕ್ಟ್ ಸುಭಾಷ್‌ಚಂದ್ರ ಬಸು ಮಾತನಾಡಿದರು. ಆರ್ಕಿಟೆಕ್ಟ್ ಶರ್ವಾಣಿ ಭಟ್ ಅತಿಥಿ ಪರಿಚಯ ಮಾಡಿದರು. ಸದಸ್ಯರಾದ ಕಲಾವಿದ ಡಾ.ಜನಾರ್ದನ ಹಾವಂಜೆ ವಂದಿಸಿದರು. ಡಿ.11ರ ಪ್ರತಿದಿನ ಸಂಜೆ 3:00ರಿಂದ 7:00ಗಂಟೆಯ ವರೆಗೆ ಈ ಪ್ರದರ್ಶನ ನಡೆಯಲಿದೆ.