ಹೊಟೇಲ್ ಕಿದಿಯೂರು ಶ್ರೀನಾಗ ಸನ್ನಿಧಿ: ಅಷ್ಟಪವಿತ್ರ ನಾಗಮಂಡಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ, ಡಿ.9: ನಗರದ ಹೊಟೇಲ್ ಕಿದಿಯೂರಿನ ಶ್ರೀನಾಗ ಸನ್ನಿಧಿಯಲ್ಲಿ ಮುಂದಿನ ವರ್ಷ ನಡೆಯಲಿರುವ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಇಂದು ಸಂಜೆ ಕಿದಿಯೂರು ಹೊಟೇಲ್ನ ಮಾಧವಕೃಷ್ಣ ಸಭಾಂಗಣದಲ್ಲಿ ನೆರವೇರಿತು.
ಈ ನಾಗಮಂಡಲವು 2024ರ ಜ.26ರಿಂದ 31 ರವರೆಗೆ ನಡೆಯಲಿದೆ. ಪುತ್ತಿಗೆ ಮಠದ ಭಾವೀ ಪರ್ಯಾಯ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಜ.18ರಂದು ಶ್ರೀಕೃಷ್ಣ ಪೂಜಾ ಕೈಂಕರ್ಯದ ಪರ್ಯಾಯ ಮಹೋತ್ಸವವಾದರೆ, ಜ.26ರಿಂದ ಕಿದಿಯೂರಿನಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಆಯೋಜನೆ ಬಹಳ ಅರ್ಥಪೂರ್ಣವಾಗಿ ಮೂಡಿ ಬರುತ್ತಿದೆ ಎಂದರು.
ಮನುಷ್ಯರ ಕೈಯಲ್ಲಿರುವ ಸಂಪತ್ತನ್ನು ಒಂದೋ ದಾನ ಮಾಡಬೇಕು ಅಥವಾ ತಿಂದು ಖಾಲಿ ಮಾಡಬೇಕು. ಇಲ್ಲವೇ ಯಾರೋ ಕಳ್ಳರು ದೋಚಿಕೊಂಡುಹೋಗುವ ಸಾಧ್ಯತೆ ಇದೆ. ಹೀಗಾಗಿ ಶ್ರೇಷ್ಠ ಕಾರ್ಯಕ್ಕೆ ವಿನಿಯೋಗಿ ಸಿಕೊಂಡು ದಾನ ನೀಡುವ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು. ದೇವರು ಕೊಟ್ಟ ಸಂಪತ್ತನ್ನು ದೇವತಾ ಕಾರ್ಯಗಳಿಗೆ ಸದುಪಯೋಗ ಪಡಿಸಬೇಕು ಎಂದರು.
ವೇದಮೂರ್ತಿಜ್ಯೋತಿಷ್ಯ ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿದಿಯೂರು ಹೋಟೆಲ್ ಮಾಲಕ ಭುವನೇಂದ್ರ ಕಿದಿಯೂರು, ಅಷ್ಟಪವಿತ್ರ ನಾಗಮಂಡಲೋತ್ಸವ ಆಯೋಜನಾ ಸಮಿತಿ ಗೌರವಾಧ್ಯಕ್ಷ ನಾಡೋಜ ಡಾ.ಜಿ.ಶಂಕರ್, ನಗರಸಭಾ ವಿಪಕ್ಷ ನಾಯಕ ರಮೇಶ್ ಕಾಂಚನ್, ವಿಜಯ ಕೊಡವೂರು, ಉದ್ಯಮಿಗಳಾದ ಪುರುಷೋತ್ತಮ್ ಪಿ. ಶೆಟ್ಟಿ, ಮನೋಹರ ಎಸ್.ಶೆಟ್ಟಿ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಹಿರಿಯಣ್ಣ ಕಿದಿಯೂರು, ಶ್ರೀಧರ ಶೆಟ್ಟಿ, ಹರಿಯಪ್ಪ ಕೋಟ್ಯಾನ್, ಗಣೇಶ್ ರಾವ್ ಉಪಸ್ಥಿತರಿದ್ದರು.
ಜಿತೇಶ್ ಬಿ. ಕಿದಿಯೂರು ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.