ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದಿಂದ ನಮ್ಮ ರಾಜ್ಯ ದಿವಾಳಿಯತ್ತ: ಕಾಮತ್
ಮಂಗಳೂರು: ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ಆರೇ ತಿಂಗಳಲ್ಲಿ ರಾಜ್ಯವು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಭ್ರಷ್ಟಾಚಾರವಿಲ್ಲದ ಆಡಳಿತ ನಡೆದರೆ ಅದು ಕಾಂಗ್ರೆಸ್ ಸರ್ಕಾರಕ್ಕೆ ಬಹುದೊಡ್ಡ ಅವಮಾನವೆಂಬ ವ್ಯಂಗ್ಯದ ಮಾತಿದೆ. ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದೆ ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದಿಂದಾಗಿ ಸಂಪದ್ಭರಿತವಾಗಿದ್ದ ನಮ್ಮ ರಾಜ್ಯ ದಿವಾಳಿಯಾಗುವ ಹಂತಕ್ಕೆ ಹೋಗುತ್ತಿರುವುದು ದುರದೃಷ್ಟಕರ, ಇತ್ತೀಚೆಗೆ ಕಾಂಗ್ರೆಸಿನ ಹಿರಿಯ ಶಾಸಕರೇ ಕರ್ನಾಟಕ ರಾಜ್ಯ ಭ್ರಷ್ಟಾಚಾರದ ಬ್ರಾಂಡ್ ಆಗುತ್ತಿದೆ ಎಂದು ಮಾಧ್ಯಮದಲ್ಲಿ ಹೇಳಿಕೆ ಕೊಟ್ಟಿರುವುದು ರಾಜ್ಯದ ಮಾನ ದೇಶ ಮಟ್ಟದಲ್ಲಿ ಹರಾಜು ಆಗುತ್ತಿರುವುದಕ್ಕೆ ಸಾಕ್ಷಿ ಎಂದು ಹೇಳಿದರು.
ರಾಜ್ಯದಲ್ಲಿ ನಡೆಯಬೇಕಿದ್ದ ಕಾಮಗಾರಿಗಳ ಅನುದಾನ ಬಿಡುಗಡೆಯಲ್ಲಿ ಅಧಿಕಾರಿಗಳ ಧನದಾಹ ಕಮಿಷನ್ ಕೊಡಬೇಕಾದ ಪರಿಸ್ಥಿತಿ ಇದ್ದು, ಅಭಿವೃದ್ಧಿ ಕೆಲಸಕ್ಕೆ ಅನುದಾನಗಳೇ ಬಿಡುಗಡೆಯಾಗುತ್ತಿಲ್ಲ. ಇದಕ್ಕೆ ಕಾಂಗ್ರೆಸ್ಸಿನ ಹಲವು ಶಾಸಕರು ಸರ್ಕಾರಕ್ಕೆ ಪತ್ರ ಬರೆದು ಅಳಲು ತೋಡಿಕೊಂಡಿದ್ದೇ ಸಾಕ್ಷಿ. ನಿನ್ನೆಯಷ್ಟೇ ಜಾರ್ಖಂಡ್ ರಾಜ್ಯದ ಕಾಂಗ್ರೆಸ್ ಎಂಪಿ ಧೀರಜ್ ಸಾಹು ಮನೆಯಲ್ಲಿ 156 ಚೀಲ ಹಾಗೂ 30 ಕಪಾಟುಗಳಲ್ಲಿ ತುಂಬಿಟ್ಟಿದ್ದ ಅಕ್ರಮ 220 ಕೋಟಿ ಕ್ಯಾಶ್ ವಶಕ್ಕೆ ಪಡೆಯಲಾಗಿದ್ದು ಈ ಮೊತ್ತ 400 ಕೋಟಿಗೂ ಮೀರುವ ಸಂಭವವಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಇತ್ತೀಚೆಗೆ ನಡೆದ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು ಪ್ರಾಮಾಣಿಕ ಬಡ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ವರ್ಗಾವಣೆ ಧಂಧೆಯ ಬಗ್ಗೆಯಂತೂ ಇತ್ತೀಚೆಗೆ ಮಾದ್ಯಮಗಳಲ್ಲೇ ಪ್ರಸಾರವಾಗಿದ್ದು ಯಾವುದೇ ಇಲಾಖೆಯಲ್ಲಿ ಕಳಂಕಿತರಿರಲಿ, ಭ್ರಷ್ಟರಿರಲಿ, ಯಾರು ಹೆಚ್ಚು ಲಂಚ ಕೊಡುತ್ತಾರೋ ಅವರನ್ನೇ ನೇಮಕ ಮಾಡುವ ಪ್ರಯತ್ನವಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳ ಔಷಧಿ ಖರೀದಿಯಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು ಸರ್ಕಾರದ ಆಡಳಿತ ಶೈಲಿಗೆ ಹಿಡಿದ ಕೈಗನ್ನಡಿ ಎಂದು ರಾಜ್ಯ ಸರಕಾರವನ್ನು ದೂರಿದರು