ಬಿಜೆಪಿಯವರೇ ಬಿಜೆಪಿಯವರಿಗೆ ಕೊಟ್ಟಿರುವ ಹೆಸರು ʼಬಕೆಟ್ ಜನತಾ ಪಾರ್ಟಿʼ: ಕಾಂಗ್ರೆಸ್
ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಒಳಜಗಳವು ಮತ್ತೊಂದು ಅಂತಕ್ಕೆ ತಿರುಗಿದ್ದು, ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ತಮ್ಮದೇ ಪಕ್ಷದ ನಾಯಕ ಅಶೋಕ್ ವಿರುದ್ಧ ಬಕೆಟ್ ಹಿಡಿದುಕೊಂಡೇ ರಾಜಕಾರಣ ಮಾಡುವವವರು ಎಂದು ಅಸಮಾಧಾನ ಹೊರಹಾಕಿದ್ದರು. ಈ ಸಂಬಂಧ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿಯವರೇ ಬಿಜೆಪಿಯವರಿಗೆ ಕೊಟ್ಟಿರುವ ಹೆಸರು ಬಕೆಟ್ ಜನತಾ ಪಾರ್ಟಿ ಎಂದು ಲೇವಡಿ ಮಾಡಿದೆ.
ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ನೀಡಿರುವ ಹೇಳಿಕೆ ಪ್ರಸ್ತಾಪಿಸಿ ‘ಎಕ್ಸ್’ನಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್, ‘ಆರ್.ಅಶೋಕ ಅವರೇ, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆಯಲು ಯಾರಿಗೆ ಬಕೆಟ್ ಹಿಡಿದಿರಿ? ಯಾವ ಬ್ರ್ಯಾಂಡ್ ಬಕೆಟ್ ಹಿಡಿದಿರಿ? ಯಾರಿಗೆ ಬಕೆಟ್ ಹಿಡಿದು ನಿಮ್ಮ ಅಕ್ರಮಗಳನ್ನು ಮುಚ್ಚಿಕೊಂಡಿದ್ದೀರಿ’ ಎಂದು ಎಂದು ವ್ಯಂಗ್ಯವಾಡಿದೆ.
“ಬಿಜೆಪಿಗೆ ಬಿಜೆಪಿಗರಿಂದಲೇ ಸಿಕ್ಕಿದ್ದು ಅದೆಷ್ಟು ಹೆಸರುಗಳು, ಭ್ರಷ್ಟ ಜನತಾ ಪಾರ್ಟಿ, ಬ್ಲಾಕ್ಮೇಲ್ ಜನತಾ ಪಾರ್ಟಿ, ಬ್ಲೂ ಬಾಯ್ಸ್ ಜನತಾ ಪಾರ್ಟಿ, ಈಗ ಹೊಸದಾಗಿ ‘ಬಕೆಟ್ ಜನತಾ ಪಾರ್ಟಿ’ ಸೇರ್ಪಡೆಯಾಗಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.