ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಇನ್ನಿಲ್ಲ
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಇಂದು ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ.
ಹಿರಿಯ ನಟಿ ಲೀಲಾವತಿ ಅವರು ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದಾರೆ. ಲೀಲಾವತಿ ಅವರು ಕನ್ನಡ ಅಷ್ಟೇ ಅಲ್ಲದೆ ತಮಿಳು, ತೆಲಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿಯೇ 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಭಕ್ತ ಕುಂಬಾರ, ಮನ ಮೆಚ್ಚಿದ ಮಡದಿ ಮತ್ತು ಸಾಂತಾ ತುಕಾರಾಂ ಚಿತ್ರಗಳಲ್ಲಿನ ಸ್ಮರಣೀಯ ಅಭಿನಯಕ್ಕಾಗಿ ಅವರು ಹೆಸರುವಾಸಿಯಾಗಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಲೀಲಾವತಿ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ
ಖ್ಯಾತ ನಟಿ ಲೀಲಾವತಿ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
50 ವರ್ಷಗಳ ಕಾಲ ಕನ್ನಡ ಚಿತ್ರರಂಗಕ್ಕೆ ಸುದೀರ್ಘ ಸೇವೆ ಸಲ್ಲಿಸಿದ್ದ ಲೀಲಾವತಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸದಾಕಾಲ ರೈತರ ಬಗ್ಗೆ ಕಾಳಜಿ ಹೊಂದಿದ್ದರು. ತಮ್ಮದೇ ಹಣದಲ್ಲಿ ಪಶುಚಿಕಿತ್ಸಾ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ ಎಂದು ಸ್ಮರಿಸಿರುವ ಸಚಿವರು, ಅವರ ನಿಧನದ ಸುದ್ದಿ ಕೇಳಿ ತೀವ್ರ ನೋವಾಯಿತು ಎಂದಿದ್ದಾರೆ.
ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ, ಕುಟುಂಬಸ್ಥರಿಗೆ ನೋವು ಸಹಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.