ಉಡುಪಿ: ಗಾಂಜಾ ಮಾರಾಟ- ಆರೋಪಿಗೆ ಜೈಲುಶಿಕ್ಷೆ, ದಂಡ
ಉಡುಪಿ, ಡಿ.6: ಏಳು ವರ್ಷಗಳ ಹಿಂದಿನ ಗಾಂಜಾ ಮಾರಾಟ ಪ್ರಕರಣದ ಆರೋಪಿಗೆ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಇಂದು ಆದೇಶ ನೀಡಿದೆ.
ಅಪ್ಸಲ್ಪುರ ಮೂಲದ ಕೋಟತಟ್ಟು ಗ್ರಾಮದಲ್ಲಿ ಬಾಡಿಗೆ ಮನೆ ನಿವಾಸಿ ಭೀಮ ಶಂಕರ ಅಳಗಿ ಶಿಕ್ಷೆಗೆ ಗುರಿಯಾದ ಆರೋಪಿ. ಗಾಂಜಾ ಸಾಗಾಟ ಮಾಡುತ್ತಿದ್ದ ಈತನನ್ನು ಕೋಟ ಪೊಲೀಸರು ಚಿತ್ರಪಾಡಿ ಗ್ರಾಮದ ಮಾರಿಯಮ್ಮ ದೇವಸ್ಥಾನದ ಬಳಿ 2016ರ ಜು.11 ರಂದು ಬಂಧಿಸಿ, 1 ಕೆ.ಜಿ 700ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಂತರ ಆಗಿನ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ ಕೆ. ತನಿಖೆ ಪೂರ್ತಿಗೊಳಿಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಆರೋಪಿತನು ತಪ್ಪಿತಸ್ಥ ಎಂದು ತಿರ್ಮಾನಿಸಿ ಆರೋಪಿಗೆ ಒಂದು ವರ್ಷ ಕಠಿಣ ಸಜೆ ಮತ್ತು 30,000ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದಾರೆ.