ಬಿಜೆಪಿಯ ಗೆಲುವು ಇವಿಎಂ ನೀಡಿದ ತೀರ್ಪು: ಸಂಜಯ್ ರಾವತ್ ಟೀಕೆ

ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್‌ಗಡ ಹಾಗೂ ರಾಜಸ್ಥಾನಗಳಲ್ಲಿ ಬಿಜೆಪಿಯ ಗೆಲುವು ಇವಿಎಂ ನೀಡಿದ ತೀರ್ಪಾಗಿದ್ದು ಇದು ಜನತೆಯ ಬೆಂಬಲವನ್ನು ಪ್ರತಿಫಲಿಸುವುದಿಲ್ಲವೆಂದು ಶಿವಸೇನಾ (ಉದ್ಧವ್ ಬಣ)ದ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

‘‘ಈ ಚುನಾವಣಾ ಫಲಿತಾಂಶಗಳು ಅನಿರೀಕ್ಷಿತ ಹಾಗೂ ಅಚ್ಚರಿಕರ. ಆದರೆ ನಾವು ಪ್ರಜಾತಾಂತ್ರಿಕ ಪ್ರಕ್ರಿಯೆಯನ್ನು ಗೌರವಿಸುತ್ತೇವೆ. ಜನಾದೇಶವು ಒಂದು ವೇಳೆ ನಿಮ್ಮ ಪಕ್ಷದ ವಿರುದ್ಧ ಬಂದರೂ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಮಧ್ಯಪ್ರದೇಶದ ಚುನಾವಣೆ ಅಚ್ಚರಿ ಮಾತ್ರವಲ್ಲ ಆಘಾತಕಾರಿಯೂ ಹೌದು. ನಾಲ್ಕು ರಾಜ್ಯಗಳ ಪೈಕಿ ಮೂರು ರಾಜ್ಯಗಳ ಚುನಾವಣೆಯನ್ನು ಇವಿಎಂ ತೀರ್ಪು ಎಂಬುದಾಗಿ ಪರಿಗಣಿಸಬೇಕು ಹಾಗೂ ಹಾಗೆಂದೇ ಒಪ್ಪಿಕೊಳ್ಳ ಬೇಕು’’ ಎಂದು ರಾವತ್ ಹೇಳಿದ್ದಾರೆ.

ಮತಪತ್ರಗಳನ್ನು ಬಳಸಿಕೊಂಡು ಚುನಾವಣೆ ನಡೆಸ ಬೇಕು ಹಾಗೂ ಅದರ ಫಲಿತಾಂಶ ಹೇಗಿರುತ್ತದೋ ನೋಡೋಣ ಎಂದು ನಾನು ಬಿಜೆಪಿಗೆ ಸವಾಲೆಸೆಯುತ್ತೇನೆ. ಇವಿಎಂಗಳ ಸಾಚಾತನದ ಹಾಗೂ ಅವುಗಳ ಕಾರ್ಯನಿರ್ವಹಣೆ ಬಗ್ಗೆ ಸಂದೇಹವಿರುವ ಜನರನ್ನು ಚುನಾವಣಾ ಆಯೋಗವು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದವರು ಹೇಳಿದರು.

ಈ ಮಧ್ಯೆ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಹಾಗೂ ಇಂಡಿಯಾ ಮೈತ್ರಿಕೂಟದ ನಾಯಕ ಫಾರೂಕ್ ಅಬ್ದುಲ್ಲಾ ಅವರು ಮತಯಂತ್ರದ ಮೇಲೆ ಜನತೆಯ ವಿಶ್ವಾಸವನ್ನು ಉಳಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ‘ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಇವಿಎಂ ಜಾರಿಗೆ ಬಂದಾಗ, ನಾನು ಮುಖ್ಯಮಂತ್ರಿಯಾಗಿದ್ದೆ. ಮತಯಂತ್ರದಲ್ಲಿ ಯಾವುದೇ ರೀತಿಯ ‘ಕಳ್ಳತನ’ ನಡೆಯಲು ಸಾಧ್ಯವೇ ಎಂದು ಆಗ ನಾನು ಚುನಾವಣಾ ಅಧಿಕಾರಿಗಳಲ್ಲಿ ಪ್ರಶ್ನಿಸಿದ್ದೆ. ಅದಕ್ಕೆ ಅವರು ಅದು ಸಾಧ್ಯವಿದೆ ಎಂದು ಹೇಳಿದ್ದರು. ಹೀಗಾಗಿ ಇವಿಎಂಗಳ ಮೇಲೆ ಜನರ ವಿಶ್ವಾಸ ಉಳಿಯಬೇಕಾದರೆ, ಈ ಯಂತ್ರ ಲೋಪರಹಿತವಾಗಿರಲು ಸೂಕ್ತ ವಿಧಾನವೊಂದನ್ನು ಕಂಡುಹಿಡಿಯಬೇಕಾಗಿದೆಯೆಂದು ಅವರು ಹೇಳಿದ್ದಾರೆ.

ಪ್ರತಿಪಕ್ಷಗಳ ನಕಾರಾತ್ಮಕ ಮನಸ್ಥಿತಿ: ಬಿಜೆಪಿ

ಆದರೆ ಇವಿಎಂ ಮತಯಂತ್ರಗಳ ಕಾರ್ಯನಿರ್ವಹಣೆ ಕುರಿತು ಪ್ರತಿಪಕ್ಷಗಳು ವ್ಯಕ್ತಪಡಿಸಿರುವ ಗುಮಾನಿಯನ್ನು ಬಿಜೆಪಿ ತಳ್ಳಿಹಾಕಿದ್ದು, ಅದೊಂದು ನಕಾರಾತ್ಮಕ ಮನೋಭಾವನೆಯೆಂದು ಟೀಕಿಸಿದೆ. ‘‘ಇಂತಹ ನಕಾರಾತ್ಮಕ ಅಭಿಪ್ರಾಯವನ್ನು ಹರಡುವುದನ್ನು ಪ್ರತಿಪಕ್ಷಗಳು ನಿಲ್ಲಿಸಬೇಕು. ಇವಿಎಂನಲ್ಲಿ ಸಮಸ್ಯೆಯಿದೆಯೆಂದು ಹೇಳುವ ಮೂಲಕ ಅವರು ಮತದಾರರನ್ನು ಅಪಮಾನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದ್ದಾರೆ.

‘‘2004-2014ರ ಚುನಾವಣೆಯಲ್ಲಿ ಇವಿಎಂಗಳನ್ನು ಬಳಸುವಾಗ ಕಾಂಗ್ರೆಸ್‌ಗೆ ಯಾವುದೇ ಸಮಸ್ಯೆಗಳಿರಲಿಲ್ಲ. ಹಿಮಾಚಲ ಪ್ರದೇಶ ಹಾಗೂ ಕರ್ನಾಟಕದಲ್ಲಿಯೂ ಕಾಂಗ್ರೆಸ್ ಗೆದ್ದಾಗ ಅವರು ಯಾವುದೇ ಪ್ರಶ್ನೆಗಳನ್ನೆತ್ತಲಿಲ್ಲ. ಅವರು ತೆಲಂಗಾಣವನ್ನೂ ಗೆದ್ದಿದ್ದಾರೆ. ಪ್ರತಿಪಕ್ಷಗಳಿಗೆ ಇವಿಎಂನಲ್ಲಾಗಲಿ ಅಥವಾ ಸಾರ್ವಜನಿಕರಲ್ಲಾಗಲಿ ಅಥವಾ ನ್ಯಾಯಾಲಯದ ಮೇಲಾಗಲಿ ನಂಬಿಕೆಯಿಲ್ಲ. ಈ ರೀತಿಯಾಗಿ ಜನಾದೇಶವನ್ನು ತಿರಸ್ಕರಿಸುವುದು ಅವರ ಕ್ಷುಲ್ಲಕಮನಸ್ಥಿತಿಯನ್ನು ತೋರಿಸುತ್ತದೆ’’ ಎಂದು ಬಿಜೆಪಿ ಸಂಸದೆ ಸಾಧ್ವಿನಿರಂಜನ ಜ್ಯೋತಿ ಟೀಕಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!