ಚಿಟ್ಟೆಗಳಿಂದ ಕೃಷಿಗೆ ಯಾವುದೇ ಹಾನಿ ಇಲ್ಲ: ಡಾ.ಎಂ.ಕೆ.ನಾಯ್ಕ್

ಉಡುಪಿ: ಪರಿಸರ ಸಮತೋಲನದಲ್ಲಿ ಚಿಟ್ಟೆಗಳ ಪಾತ್ರ ಮಹತ್ತರವಾದುದು ಎಂದು ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಕೆ. ನಾಯ್ಕ್ ಹೇಳಿದರು. 

ಉಡುಪಿ ಎಂಜಿಎಂ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಜಂಟಿ ಆಶ್ರಯದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಇಂದು ನಡೆದ ಕಾಲೇಜಿನ ಸವಿತಾ ಶಾಸ್ತ್ರೀ ಚಿಟ್ಟೆ ಪಾರ್ಕ್ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. 

ಚಿಟ್ಟೆಗಳ ಜೀವಿತಾವಧಿ ಕೆಲವೇ ದಿನಗಳಾಗಿದ್ದರೂ ಹಸಿರು ಪರಿಸರದಲ್ಲಿ ತನ್ನ ಪಾತ್ರವನ್ನು ಜವಾಬ್ದಾರಿಯುತವಾಗಿ ನಿಭಾಯಿಸುತ್ತವೆ. ಕೃಷಿಗೆ ಇತರೆ ಕೀಟಗಳಿಂದ ತೊಂದರೆ ಆದರೂ ಚಿಟ್ಟೆಗಳಿಂದ ಯಾವುದೇ ಹಾನಿಯಾಗುವುದಿಲ್ಲ. ಆದರೆ ಕೃಷಿ ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕ, ರಾಸಾಯನಿಕ ಚಿಟ್ಟೆಗಳ ಸಂತತಿಗೆ ಮಾರಕವಾಗಿದೆ ಎಂದರು.

ಮಾಲಿನ್ಯ ಮುಕ್ತ ಪರಿಸರ ನಿರ್ಮಾಣಕ್ಕೆ ಚಿಟ್ಟೆ ಪಾರ್ಕ್ ಗಳು ಅವಶ್ಯಕ. ಕರಾವಳಿ ಪರಿಸರಕ್ಕೆೆ ಚಿಟ್ಟೆ ಪಾರ್ಕ್‌ ನಿರ್ಮಾಣ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿರುವ ಕಡಿಮೆ ಜಾಗದಲ್ಲಿಯೂ ಚಿಟ್ಟೆ ಪಾರ್ಕ್ ನಿರ್ಮಿಸಿ ಆರೋಗ್ಯಕರ ಪರಿಸರ ವ್ಯವಸ್ಥೆೆ ರೂಪಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ತರಂಗ ವಾರಪತ್ರಿಕೆಯ ವ್ಯಪಸ್ಥಾಪಕ ಸಂಪಾದಕಿ ಡಾ. ಸಂಧ್ಯಾ ಎಸ್. ಪೈ ಮಾತನಾಡಿದರು. ಎಂಜಿಎಂ ಕಾಲೇಜು ಟ್ರಸ್ಟ್ ನ ಅಧ್ಯಕ್ಷ ಟಿ. ಸತೀಶ್ ಯು. ಪೈ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಇಸಾ ಟೆಕ್ನಾಲಜಿ ಪ್ರೈ.ಲಿ. ನಿರ್ದೇಶಕ ಡಾ. ಪ್ರಭಾಕರ್ ಶಾಸ್ತ್ರಿ , ಎಂಜಿಎಂ ಸಂಧ್ಯಾ ಕಾಲೇಜು ಪ್ರಾಂಶುಪಾಲ ಡಾ. ದೇವಿದಾಸ್ ನಾಯಕ್, ಎಂಜಿಎಂ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ, ಬೆಳ್ವಾಯಿ ಚಿಟ್ಟೆ ಪಾರ್ಕ್‌ನ ಸಮ್ಮಿಲನ್ ಶೆಟ್ಟಿ, ಒಕ್ಲಹೊಮ ಮೆಡಿಕಲ್ ರಿಸರ್ಚ್ ಫೌಂಡೇಶನ್‌ನ ಸಹಾಯಕ ಪ್ರಾಧ್ಯಾಪಕಿ ಡಾ. ಹರಿಣಿ ಭಗವಂತ್, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಬಿ.ಪಿ. ವರದರಾಯ ಪೈ, ಮಣಿಪಾಲ ಬರ್ಡರ್ಸ್ ಕ್ಲಬ್‌ನ ತೇಜಸ್ವಿ ಆಚಾರ್ಯ ಉಪಸ್ಥಿತರಿದ್ದರು.

ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ.ಲಕ್ಷ್ಮೀ ನಾರಾಯಣ ಕಾರಂತ್ ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!