ದೇಶಾದ್ಯಂತ 6.7 ಲಕ್ಷ ಮಂದಿಗೆ ಚಪ್ಪಲಿ ವಿತರಣೆ: ರಮೇಶ್ ಧಾಮಿ

ಉಡುಪಿ: ದೇಶದಾದ್ಯಂತ ಹಳೆಯ ಪಾದರೆಕ್ಷೆಗಳನ್ನು ಸಂಗ್ರಹಿಸಿ ಮರುಬಳಕೆ ಮಾಡಿ, ಹೊಸ ಪಾದರಕ್ಷೆಯನ್ನು ತಯಾರಿಸಿ ಬಡ ಜನರಿಗೆ ಹಾಗೂ ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿದೆ. ಈಗಾಗಲೇ ದೇಶದಾದ್ಯಂತ 6.7 ಲಕ್ಷ ಮಂದಿಗೆ ಚಪ್ಪಲಿ ವಿತರಿಸಲಾಗಿದೆ ಎಂದು ಮುಂಬೈಯ ಗ್ರೀನ್ ಸೋಲ್ ಸಂಸ್ಥೆಯ ಸ್ಥಾಪಕ, ಯುವ ಉದ್ಯಮಿ ರಮೇಶ್ ಧಾಮಿ ಹೇಳಿದ್ದಾರೆ.

ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ತ್ರಿಶಾ ಸಮೂಹ ಸಂಸ್ಥೆಯ ಸಹಕಾರದಲ್ಲಿ ಸೋಮವಾರ ಉಡುಪಿ ಮಿಷನ್ ಕಂಪೌಂಡಿನ ಜಗನ್ನಾಥ ಸಭಾ ಭವನದಲ್ಲಿ ಆಯೋಜಿಸಲಾದ ‘ದಿಕ್ಸೂಚಿ’ ಪ್ರೇರಣಾ ಮಾತು- ಮಾತುಕತೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಮುಂಬೈನಲ್ಲಿ 10 ವರ್ಷಗಳ ಹಿಂದೆ ಮ್ಯಾರಥಾನ್ ಓಟಗಳಲ್ಲಿ ಬಳಸುತ್ತಿದ್ದ ದುಬಾರಿ ವಿದೇಶಿ ಶೂಗಳನ್ನು ಮರು ಬಳಕೆ ಮಾಡುತ್ತಿದ್ದೆ. ಮುಂದೆ ಹೀಗೆ ಹಳೆ ಶೂಗಳನ್ನು ಮರುಬಳಕೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದೆವು. ಇದಕ್ಕಾಗಿ ಹೊಸ ತಂತ್ರಜ್ಞಾನ ಕಲಿಯಲು 500ರಿಂದ 600 ಕಂಪೆನಿಗಳನ್ನು ಸಂಪರ್ಕಿಸಿ ದರೂ ಪ್ರಯೋಜನವಾಗಿಲ್ಲ. 2013ರಲ್ಲಿ ರಾಮ್ ಏಕ್ಸ್‌ಪೋರ್ಟ ಕಂಪೆನಿ ಈ ನಮಗೆ ಅವಕಾಶ ನೀಡಿತು. ಈಗ ಹಳೆ ಪಾದರಕ್ಷೆಗಳನ್ನು ಮರುವಿನ್ಯಾಸ ಮಾಡ ಲಾಗುತ್ತಿದ್ದು, ವಿಶ್ವದಲ್ಲಿ ಯಾವುದೇ ಕಂಪೆನಿಗಳು ಈ ಕೆಲಸದಲ್ಲಿ ಮಾಡುತ್ತಿಲ್ಲ ಎಂದರು.

ಕಾರ್ಯಕ್ರಮವನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ ಶೆಣೈ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಜನತಾ ಗ್ರೂಪ್‌ನ ಪ್ರಶಾಂತ್ ಕುಂದರ್, ತ್ರಿಶಾ ಸಮೂಹ ಸಂಸ್ಥೆಯ ಮುಖ್ಯಸ್ಥ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ರಮೇಶ್ ಧಾಮಿ ಜೊತೆ ಸಂವಾದವನ್ನು ಅವಿನಾಶ್ ಕಾಮತ್ ನಡೆಸಿ ಕೊಟ್ಟರು. ರವಿರಾಜ್ ಎಚ್.ಪಿ. ಸ್ವಾಗತಿಸಿದರು. ಜನಾರ್ದನ ಕೊಡವೂರು ವಂದಿಸಿದರು. ನಮ್ರತಾ ರಾವ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!