ಒಂಟಿಸಲಗ ದಾಳಿ- 8 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಇನ್ನಿಲ್ಲ
ಹಾಸನ: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಬರೋಬ್ಬರಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವಿಗೀಡಾಗಿದೆ. ರೆಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ವೇಳೆ, ಒಂಟಿ ಸಲಗವೊಂದು ಹೊಟ್ಟೆಗೆ ತಿವಿದಿದ್ದರಿಂದ ಸಾಕಾನೆ ಅರ್ಜುನ ಮೃತಪಟ್ಟಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ದಾಳಿ ಮಾಡಿದೆ. ಈ ಘಟನೆಯಲ್ಲಿ ಅರ್ಜುನ ಆನೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಕಾರ್ಯಾಚರಣೆ ವೇಳೆ ಒಂಟಿಸಲಗ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಕೊನೆಗೆ ಒಂಟಿಸಲಗದ ಜೊತೆ ಅರ್ಜುನ ಆನೆಯು ಒಂಟಿಯಾಗಿ ಹೋರಾಟ ನಡೆಸಿದೆ. ಈ ಕಾಳಗ ಆರಂಭವಾಗುತ್ತಿದ್ದಂತೆ ಅರ್ಜುನನ ಮೇಲಿನಿಂದ ಮಾವುತ ಇಳಿದು ಓಡಿದ್ದಾರೆ. ಅರ್ಜುನ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
22 ವರ್ಷಗಳ ಕಾಲ ದಸರಾದಲ್ಲಿ ಭಾಗವಹಿಸಿದ್ದ ಸಾಕಾನೆ ಅರ್ಜುನ 8 ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ. ಜಂಬೂಸವಾರಿಯಲ್ಲಿ ನಿಶಾನೆ ಆನೆಯಾಗಿ ಅರ್ಜುನ ಭಾಗಿಯಾಗಿದ್ದ. ಅರ್ಜುನ ಆನೆಗೆ 65 ವರ್ಷ ವಯಸ್ಸಾಗಿತ್ತು. 288ಮೀ ಎತ್ತರ, 5800 ರಿಂದ 6000 ಕೆ.ಜಿ. ತೂಕ ಇರುವುದು ಇತ್ತೀಚೆಗೆ ದಸರಾದಲ್ಲಿ ಭಾಗವಹಿಸಿದ್ದ ಸಂದರ್ಭ ಗೊತ್ತಾಗಿತ್ತು.