‘ನಡಿಗೆ’ ಅಭಿಯಾನ ಯಶಸ್ವಿ- 15 ಸಾವಿರ ಹಳೆಯ ಪಾದರಕ್ಷೆಗಳ ಸಂಗ್ರಹ

ಉಡುಪಿ: ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ನಡೆಯುವ ಬಡ ಮಕ್ಕಳಿಗೆ ಪಾದರಕ್ಷೆಯನ್ನು ಉಚಿತವಾಗಿ ತಯಾರಿಸಿ ಒದಗಿಸುವ ಮುಂಬೈಯ ಗ್ರೀನ್ ಸೋಲ್ ಸಂಸ್ಥೆಗೆ ಕಚ್ಚಾ ವಸ್ತುಗಳನ್ನು ನೀಡುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ಸಾವಿರ ಹೆಜ್ಜೆಗಳಿಗೆ ನಿಮ್ಮ ಕೊಡುಗೆ ‘ನಡಿಗೆ’ ಹಳೆಯ ಪಾದರಕ್ಷೆಗಳ ಸಂಗ್ರಹ ಅಭಿಯಾನ ರವಿವಾರ ಯಶಸ್ವಿಯಾಗಿ ಸಮಾಪ್ತಿಗೊಂಡಿದೆ.

ನ.30ರಿಂದ ಡಿ.2ರವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ಆವರಣದಲ್ಲಿ ನಡೆದ ಅಭಿಯಾನಕ್ಕೆ ಮಂಗಳೂರು, ಚಿಕ್ಕಮಗಳೂರು, ಕುಂದಾಪುರ, ಕಾರ್ಕಳ ಸೇರಿದಂತೆ ನಾನಾ ಕಡೆಯ ಸಾರ್ವಜನಿಕರು ತಾವು ಬಳಸಿದ ಸುಸ್ಥಿತಿಯಲ್ಲಿ ರುವ ಪಾದರಕ್ಷೆಗಳನ್ನು ದಾನ ರೂಪದಲ್ಲಿ ನೀಡಿದ್ದಾರೆ. ಹೀಗೆ ಮೂರು ದಿನಗಳ ಕಾಲ ನಡೆದ ಅಭಿಯಾನದಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಹಳೆಯ ಪಾದರಕ್ಷೆ ಗಳು ಸಂಗ್ರಹವಾಗಿವೆೆ ಎಂದು ಅಭಿಯಾನದ ರೂವಾರಿ ಅವಿನಾಶ್ ಕಾಮತ್ ಮಾಹಿತಿ ನೀಡಿದ್ದಾರೆ.

ಸಮಾರೋಪ ಸಮಾರಂಭ: ರವಿವಾರ ಎಂಜಿಎಂ ಕಾಲೇಜಿನ ಆವರಣದಲ್ಲಿ ನಡೆದ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಗ್ರೀನ್ ಸೋಲ್ ಸಂಸ್ಥೆಯ ಸಂಸ್ಥಾಪಕ ರಮೇಶ್ ಧಾಮಿ ಮಾತನಾಡಿ, ಇದೊಂದು ಅತ್ಯುತ್ತಮ ಅಭಿಯಾನವಾಗಿದೆ. ಇಡೀ ದೇಶದಲ್ಲಿಯೇ ಈ ರೀತಿ ನಮಗೆ ಕಚ್ಛಾ ವಸ್ತುವನ್ನು ಸಂಗ್ರಹಿಸಿಕೊಟ್ಟ ಮೊತ್ತ ಮೊದಲ ಅಭಿಯಾನ ಇದಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಉಡುಪಿಯ ಆಯ್ದ 125 ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗ್ರೀನ್‌ಸೋಲ್ ಫೌಂಡೇಶನ್ ಹಳೆಯ ಬಟ್ಟೆಗಳಿಂದ ತಯಾರಿಸುವ ಬ್ಯಾಗ್, ಕುಳಿತುಕೊಳ್ಳಲು ಬಳಸುವ ಮ್ಯಾಟ್ ಮತ್ತು ಹಳೆಯ ಪಾದರಕ್ಷೆಗಳಿಂದ ತಯಾರಿಸಿದ ಹೊಸ ಪಾದರಕ್ಷೆಗಳನ್ನು ವಿತರಿಸಲಾಯಿತು. ಈ ಅಭಿಯಾನದಲ್ಲಿ ತೊಡಗಿಸಿಕೊಂಡ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪರಿಸರವಾದಿ ಜೀತ್ ಮಿಲನ್ ರೊಚೆ, ಮನೋ ವೈದ್ಯ ಡಾ.ಪಿ.ವಿ.ಭಂಡಾರಿ, ಹ್ಯುಮನಿಟಿ ಟ್ರಸ್ಟ್‌ನ ಸಂಸ್ಥಾಪಕ ರೋಶನ್ ಡಿಸೋಜ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್, ಎಚ್‌ಪಿಆರ್ ಗ್ರೂಪ್‌ನ ಅಧ್ಯಕ್ಷ ಹರಿಪ್ರಸಾದ್ ರೈ, ಸಮುದ್ಯತಾ ಗ್ರೂಪ್‌ನ ನಿರ್ದೇಶಕ ಯೋಗೇಂದ್ರ ತಿಂಗಳಾಯ ಉಪಸ್ಥಿತರಿದ್ದರು.

ಅವಿನಾಶ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿಗೈಲ್ ಎಸ್.ಅಂಚನ್ ಮಕ್ಕಳ ಪಟ್ಟಿ ವಾಚಿಸಿದರು. ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!