ಎಲ್‌ಪಿಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 21 ರೂ. ಹೆಚ್ಚಳ!

ನವದೆಹಲಿ: 2023ರ ವರ್ಷಾಂತ್ಯದಲ್ಲಿ ಕೇಂದ್ರ ಸರ್ಕಾರ ಗ್ರಾಹಕರಿಗೆ ಶಾಕ್ ನೀಡಿದ್ದು, ಡಿಸೆಂಬರ್‌ನ ಮೊದಲ ದಿನವೇ ಎಲ್‌ಪಿಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 21 ರೂಪಾಯಿ ಹೆಚ್ಚಳ ಮಾಡಿದೆ.

ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡಿದ್ದು, ಇಂದಿನಿಂದಲೇ (ಡಿ.1 ಶುಕ್ರವಾರ) ಹೊಸ ದರ ಅನ್ವಯವಾಗಲಿದೆ. ದರ ಹೆಚ್ಚಳದ ಬಳಿಕ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಚಿಲ್ಲರೆ ಮಾರಾಟದ ಬೆಲೆ  1796.50 ರೂಪಾಯಿಗೆ ಏರಿಕೆಯಾಗಿದೆ. ಇದು ರಾಷ್ಟ್ರ ರಾಜಧಾನಿ ದೆಹಲಿಯ ಬೆಲೆಯಾಗಿದ್ದು, ಇದೇ ಬೆಲೆ ವಾಣಿಜ್ಯ ನಗರಿ ಮುಂಬೈನಲ್ಲಿ 1,749 ರೂ.ಗೆ ಜಿಗಿತವಾಗಿದೆ.

ಕರ್ನಾಕಟ ರಾಜಧಾನಿ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,904 ರೂಪಾಯಿಗೆ ಏರಿಕೆಯಾಗಿದೆ. ಹೊಸದಾಗಿ ಬೆಲೆ ಪರಿಷ್ಕರಣೆ ಬಳಿಕ ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,968.5 ರೂಪಾಯಿ ಹಾಗೂ ಕೋಲ್ಕತ್ತದಲ್ಲಿ 1,908 ರೂಪಾಯಿ ಇದೆ. 14.2 ಕೆಜಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕಂಪನಿಗಳು ಯಾವುದೇ ಬದಲಾವಣೆ ಮಾಡಿಲ್ಲ. ಈ ಹಿಂದೆ ಸರ್ಕಾರ ಈ ಸಿಲಿಂಡರ್‌ನ ಬೆಲೆಯನ್ನು 200 ರೂಪಾಯಿಗಳಷ್ಟು ಕಡಿಮೆ ಮಾಡಿತ್ತು.

ಇಂಡಿಯನ್ ಆಯಿಲ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಈ ಸಿಲಿಂಡರ್ ದೆಹಲಿಯಲ್ಲಿ 903 ರೂ.ಗೆ ಲಭ್ಯವಿದೆ. ಈ ಸಿಲಿಂಡರ್ ನೋಯ್ಡಾದಲ್ಲಿ 900.50 ರೂ.ಗೆ ಲಭ್ಯವಿದೆ. ಅದೇ ರೀತಿ, ಪ್ರತಿ ಸಿಲಿಂಡರ್ ಕೋಲ್ಕತ್ತಾದಲ್ಲಿ ರೂ 929, ಮುಂಬೈನಲ್ಲಿ ರೂ 902.50 ಮತ್ತು ಚೆನ್ನೈನಲ್ಲಿ ರೂ 918.50 ಕ್ಕೆ ಲಭ್ಯವಿದೆ.

ತೈಲ ಮಾರುಕಟ್ಟೆ ಕಂಪನಿಗಳು ಡಿಸೆಂಬರ್ 1 ರಂದು ಏವಿಯೇಷನ್ ​​ಟರ್ಬೈನ್ ಇಂಧನದ (ಎಟಿಎಫ್) ಬೆಲೆಯನ್ನು ಕಡಿಮೆ ಮಾಡಿದೆ. ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಈಗ ರಾಜಧಾನಿ ದೆಹಲಿಯಲ್ಲಿ 1,06,155.67 ರೂ., ಕೋಲ್ಕತ್ತಾದಲ್ಲಿ 1,44,639.70 ರೂ., ಮುಂಬೈನಲ್ಲಿ 99,223.44 ರೂ. ಮತ್ತು ಚೆನ್ನೈನಲ್ಲಿ ಪ್ರತಿ ಕಿಲೋ ಲೀಟರ್‌ಗೆ 1,09,966.39 ರೂ.ಗೆ ಸಿಗಲಿದೆ.

Leave a Reply

Your email address will not be published. Required fields are marked *

error: Content is protected !!