ಹೆಲ್ಮೆಟ್ ವಿಚಾರಕ್ಕೆ ಯುವ ವಕೀಲನ ಮೇಲೆ ಹಲ್ಲೆ- ಪಿಎಸ್ಸೈ ಸಹಿತ 6 ಪೊಲೀಸರ ಅಮಾನತು
ಚಿಕ್ಕಮಗಳೂರು, ಡಿ.1: ಹೆಲ್ಮೆಟ್ ಹಾಕದ ಕಾರಣಕ್ಕೆ ಯುವ ವಕೀಲನನ್ನು ರಸ್ತೆಯಲ್ಲಿ ಅಡ್ಡ ಹಾಕಿದ ಪೊಲೀಸರು ವಕೀಲನನ್ನು ಠಾಣೆಗೆ ಕರೆದೊಯ್ದು ಮನಸೋ ಇಚ್ಛೆ ಥಳಿಸಿರುವ ಘಟನೆ ಗುರುವಾರ ರಾತ್ರಿ ನಗರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಘಟನೆ ಹಿನ್ನೆಲೆಯಲ್ಲಿ ನೂರಾರು ವಕೀಲರು ನಗರದ ಪೊಲೀಸ್ ಠಾಣೆ ಎದುರು ಜಮಾಯಿಸಿ ಮಧ್ಯರಾತ್ರಿವರೆಗೂ ಪ್ರತಿಭಟನೆ ನಡೆಸಿದ್ದು, ವಕೀಲನ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ನಗರ ಠಾಣೆಯ ಪಿಎಸ್ಸೈ ಸೇರಿದಂತೆ 6 ಮಂದಿ ಪೊಲೀಸರನ್ನು ಅಮಾನತು ಮಾಡಿ ಎಸ್ಪಿ ಆದೇಶಿಸಿದ್ದಾರೆ.
ಗುರುವಾರ ರಾತ್ರಿ ಯುವ ವಕೀಲ ಪ್ರೀತಮ್ ಎಂಬವರು ನಗರದಲ್ಲಿ ತಮ್ಮ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದರು. ರಾತ್ರಿ ವೇಳೆ ಬೀಟ್ ನಲ್ಲಿದ್ದ ಪೊಲೀಸರು ವಕೀಲನನ್ನು ಅಡ್ಡ ಹಾಕಿ ಹೆಲ್ಮೆಟ್ ಹಾಕದಿರುವುದನ್ನು ಪ್ರಶ್ನಿಸಿ ಬೈಕ್ ನ ಕೀ ಅನ್ನು ಕಿತ್ತುಕೊಂಡಿದ್ದಾರೆ. ಈ ವೇಳೆ ವಕೀಲ ಪ್ರೀತಮ್, ದಂಡ ಕಟ್ಟುತ್ತೇನೆ, ಬೈಕ್ ಕೀ ಕಿತ್ತುಕೊಂಡಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭ ಸ್ಥಳದಲ್ಲಿದ್ದ ಪೊಲೀಸರು ಹಾಗೂ ವಕೀಲನ ನಡುವೆ ವಾಗ್ವಾದ ನಡೆದಿದೆ.
ಕೋಪಗೊಂಡ ಪೊಲೀಸರು ವಕೀಲನನ್ನು ಠಾಣೆಗೆ ಕರೆದೊಯ್ದು ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ನಗರ ಠಾಣೆ ಎದುರು ಸುಮಾರು 50ಕ್ಕೂ ಹೆಚ್ಚು ವಕೀಲರು ಜಮಾಯಿಸಿದ್ದಾರೆ.
ಪೊಲೀಸರ ವರ್ತನೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ವಕೀಲರು ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಠಾಣೆಗೆ ದೂರು ಸಲ್ಲಿಸಿದ್ದಾರೆ.
ದೂರು ನೀಡಿದರೂ ಪೊಲೀಸರ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ ವಕೀಲರ ತಂಡ ಠಾಣೆ ಎದುರು ಮಧ್ಯರಾತ್ರಿವರೆಗೂ ಪ್ರತಿಭಟನೆ ನಡೆಸಿದ್ದು, ಎಸ್ಪಿ ವಿರುದ್ಧವೂ ಘೋಷಣೆ ಕೂಗಿ ಎಸ್ಪಿ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿದ್ದಾರೆ.
ಈ ವೇಳೆ ಎಸ್ಪಿ ಡಾ.ವಿಕ್ರಮ್ ಅಮಟೆ ಸ್ಥಳಕ್ಕಾಗಮಿಸಿ ಪ್ರತಿಭಟನಾನಿರತರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ವಕೀಲನ ಮೇಲೆ ಹಲ್ಲೆ ಮಾಡಿದ ಪೊಲೀಸರ ವಿರುದ್ಧ ದೂರು ದಾಖಲಿಸಿಕೊಂಡು ಪೊಲೀಸರನ್ನು ಬಂಧಿಸದ ಹೊರತು ಧರಣಿ ಕೈಬಿಡುವುದಿಲ್ಲ ಎಂದು ಎಚ್ಚರಿಸಿ ಧರಣಿ ಮುಂದುವರಿಸಿದ್ದಾರೆ.
ಧರಣಿ ತೀವ್ರವಾಗುತ್ತಿದ್ದಂತೆ ವಕೀಲನ ಮೇಲೆ ಹಲ್ಲೆ ಮಾಡಿದ ಪೊಲೀಸರ ಸಹಿತ ನಗರಠಾಣೆಯ ಪಿಎಸ್ಸೈ ಮಹೇಶ್ ಸೇರಿದಂತೆ 6 ಮಂದಿ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸೆಕ್ಷನ್ 307,324, 506,504 ಅಡಿಯಲ್ಲಿ ದೂರು ದಾಖಲಾಗಿದ್ದು, ನಗರ ಠಾಣೆಯ ಪಿಎಸ್ಸೈ, ಎಸ್ಸೈ ಸೇರಿದಂತೆ 6 ಮಂದಿ ಪೊಲೀಸರನ್ನು ಅಮಾನತುಗೊಳಿಸಿ ಎಸ್ಪಿ ಆದೇಶ ಹೊರಡಿಸಿದ್ದಾರೆ.
ಪೊಲೀಸರ ದೌರ್ಜನ್ಯ ಖಂಡಿಸಿ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆಗೆ ಬಾರ್ ಕೌನ್ಸಿಲ್ ಸದಸ್ಯರು ಕರೆ ನೀಡಿದ್ದು, ಪ್ರತಿಭಟನೆಗೆ ರಾಜ್ಯದ ವಿವಿಧ ಜಿಲ್ಲೆಗಳ ವಕೀಲರು ಆಗಮಿಸಲಿದ್ದಾರೆಂದು ತಿಳಿದು ಬಂದಿದೆ.”