ಸಿಪಿಐಎಂ ಕಾರ್ಯಕರ್ತ, ಯಕ್ಷಗಾನ ವಿಮರ್ಶಕ ಟಿ.ಅಂಗಾರ ಇನ್ನಿಲ್ಲ

ಉಡುಪಿ, ಡಿ.01: ವಿಮಾ ನೌಕರರ ಸಂಘದ ಮಾಜಿ ಉಪಾಧ್ಯಕ್ಷ ಮತ್ತು ಸಿಪಿಐಎಂ ಸದಸ್ಯ ತೊಟ್ಟಂ ಅಂಗಾರ (86) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.

1961ರಲ್ಲಿ ಚಿಕ್ಕಮಗಳೂರು ಎಲ್‌ಐಸಿ ಶಾಖೆಯಲ್ಲಿ ಸಹಾಯಕರಾಗಿ ಸೇರಿದ ಅವರು, 1991ರಿಂದ 1994ರವರೆಗೆ ಉಡುಪಿಯ ಎಲ್‌ಐಸಿ ನೌಕರರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಮತ್ತು 1995ರಿಂದ 1996ರವರೆಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದರು.

ಸಮುದಾಯ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿ ತೊಡಗಿಸಿಕೊಂಡಿದ್ದ ಇವರು, ಕಲೆ, ಸಾಹಿತ್ಯ, ನೃತ್ಯ ಪ್ರಕಾರಗಳು ಮತ್ತು ಜಾನಪದ ಕಲೆಗಳ ಬೆಳವಣಿಗೆಗೆ ತೊಡಗಿಸಿಕೊಂಡಿದ್ದರು. ಪಾರಂಪರಿಕ ಬೆಡಗು ಯಕ್ಷಗಾನದ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದ ಇವರು ಓರ್ವ ಉತ್ತಮ ವಿಮರ್ಶಕರಾಗಿದ್ದರು.

ಬಸ್ ದರ ಏರಿಕೆ ಸೇರಿದಂತೆ ಹಲವು ಜನಪರ ಹೋರಾಟಗಳಲ್ಲಿ ತೊಡಗಿಸಿ ಕೊಂಡಿದ್ದ ಇವರು, ಕಳೆದ 34 ವರ್ಷಗಳಿಂದ ಉಡುಪಿ ಜಿಲ್ಲೆಯ ಮಳೆ ಪ್ರಮಾಣದ ಅಂಕಿಅಂಶಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದರು. ವೈಜ್ಞಾನಿಕ ಪುಸ್ತಕಗಳನ್ನು ಮಾರಾಟ ಮಾಡುವುದು ಇವರ ಹವ್ಯಾಸವಾಗಿತ್ತು.

ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರ ಆಶಯದಂತೆ ದೇಹವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾನ ಮಾಡಲಾಗುತ್ತದೆ. ಇವರ ನಿಧನಕ್ಕೆ ವಿಮಾ ನೌಕರರ ಸಂಘ ಉಡುಪಿ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!