ಅಗಲಿದ ಪತ್ನಿಯ ಫೋಟೋದೊಂದಿಗೆ ದಾಂಪತ್ಯ ಜೀವನದ ಬೆಳ್ಳಿಹಬ್ಬ ಆಚರಿಸಿದ ಪತಿ!
ಕುಂದಾಪುರ, ನ.30: ಅನಾರೋಗ್ಯದಿಂದ ಮೃತಪಟ್ಟ ಪತ್ನಿಯ ಛಾಯಚಿತ್ರದ ಪ್ರತಿಕೃತಿ ಇಟ್ಟು ದಾಂಪತ್ಯ ಜೀವನದ ಬೆಳ್ಳಿಹಬ್ಬವನ್ನು ಆಚರಿಸಿಕೊಂಡ ಅಪರೂಪದ ಕಾರ್ಯಕ್ರಮವನ್ನು ಕುಂದಾಪುರದ ಬಡಾಕೆರೆಯ ಹಾಲ್ನಲ್ಲಿ ನಡೆಸಿ, ಮಾದರಿ ಪತಿ ಎನಿಸಿಕೊಂಡಿದ್ದಾರೆ.
ಬಡಾಕೆರೆ ಲಕ್ಷ್ಮೀ ಜನಾರ್ದನ ಸಭಾಭವನ ಬುಧವಾರ ಇಂತಾದ್ದೊಂದು ವಿಶಿಷ್ಟ ಆಚರಣೆಗೆ ಸಾಕ್ಷಿಯಾಯಿತು. ಅಗಲಿದ ಪತ್ನಿ ಬಯಕೆಯಂತೆ ದಾಂಪತ್ಯ ಜೀವನದ ರಜತ ಸಂಭ್ರಮ ಪತ್ನಿ ಛಾಯಾ ಪ್ರತಿಕೃತಿ ಜೊತೆ ಆಚರಿಸಿಕೊಂಡ ಚಿತ್ರ ಸೋಸಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕುಂದಾಪುರ ಸಪ್ತಗಿರಿ ಕೋಆಪರೇಟಿವ್ ಸೊಸೈಟಿ ಸಂಸ್ಥಾಪಕ ಸದ್ಗುರು ಚಂದ್ರಶೇಖರ್ ಇಂತಾದ್ದೊಂದು ಸಂಪ್ರದಾಯಕ್ಕೆ ಮುನ್ನುಡಿ ಬರೆದಿದ್ದಾರೆ. ವಿವಾಹ ಮಹೋತ್ಸವ ಬೆಳ್ಳಿಹಬ್ಬ ಆಚರಣೆ ಹೀಗೆ ಇರಬೇಕು ಎನ್ನುವ ಪತ್ನಿ ಸಮಾ ಸಲಹೆಯನ್ನು ಪತಿ ಪಾಲಿಸಿದ್ದಾರೆ. ಆದರೆ ಸಮಾ ಕಳೆದ ತಿಂಗಳು ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತಿ ಚಂದ್ರಶೇಖರ್ ಪತ್ನಿ ಆಶಯದಂತೆ ಈಡೇರಿಸಿ, ಮಾದರಿ ಪತಿಯಾಗಿದ್ದಾರೆ.
ಪತ್ನಿಯಷ್ಟೇ ಎತ್ತರ ಅಳತೆಯ ಛಾಯಾಪ್ರತಿಕೃತಿ ನಿರ್ಮಿಸಿ ಪತ್ನಿಯ ಬಯಕೆ ಈಡೇರಿಸಿದ್ದು, ಈ ವಿನೂತನ ಕಾರ್ಯಕ್ರಮದಲ್ಲಿ ನೂರಾರು ಜನ ಭಾಗಿ ಯಾಗಿದ್ದರು. ಪತಿ ಹಾಗೂ ಹೆಣ್ಣು ಮಕ್ಕಳ ನಡುವೆ ನಿಲ್ಲಿಸಿದ ಸಮಾ ಛಾಯಾಪ್ರತಿಕೃತಿ ಎನ್ನುವುದು ಗೊತ್ತಾಗದಷ್ಟು ನೈಜವಾಗಿದ್ದರೆ, ಭಾಗವಹಿಸಿದವರ ಹಾರೈಸಿದವರ ಕಣ್ಣೀರಿನೊಟ್ಟಿಗೆ ನಗುವೂ ಇತ್ತು ಎಂಬುದು ವಿಶೇಷ.