ಬಿಟ್ಟಿ ಭಾಗ್ಯಗಳಿಗೆ ಮರುಳಾದ ಜನತೆ ಬೆಲೆ ತೆರುವ ಸಮಯ ಬಂದಿದೆ: ಕುಯಿಲಾಡಿ

ಉಡುಪಿ: ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಕೈಸುಟ್ಟುಕೊಂಡಿರುವ ರಾಜ್ಯ ಕಾಂಗ್ರೆಸ್ ಸರಕಾರ, ಇದೀಗ ಗಾಯದ ಮೇಲೆ ಬರೆ ಹಾಕಲು ಪ್ರಾರಂಭಿಸಿದೆ. ಪಹಣಿ ಪತ್ರದ ಶುಲ್ಕವನ್ನು ರೂ.10 ರಿಂದ ರೂ.25ಕ್ಕೆ ಏರಿಸಿರುವ ರಾಜ್ಯ ಸರಕಾರ ವಿಳಂಬಿತ ಜನನ ಮರಣ ದೃಢೀಕರಣ ಪತ್ರದ ಶುಲ್ಕವನ್ನು ರೂ.50 ರಿಂದ ರೂ.100ಕ್ಕೆ ಹೆಚ್ಚಿಸಿದೆ. ಉಚಿತ ಭಾಗ್ಯಗಳಿಗೆ ಮರುಳಾದ ಜನತೆ ಇಂದು ಬೆಲೆ ತೆರುವ ಸಮಯ ಸನ್ನಿಹಿತವಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಸಮಸ್ಯೆಗಳ ಸರಮಾಲೆ ಮುಗಿಯುತ್ತಲೇ ಇಲ್ಲ. ಬೊಕ್ಕಸ ಬರಿದಾಗಿರುವ ಕಾರಣಕ್ಕೆ ತಾಂತ್ರಿಕ ನೆಪವೊಡ್ಡಿ ಹಲವಾರು ಅರ್ಜಿ ಗಳನ್ನು ತಡೆಹಿಡಿಯಲಾಗುತ್ತಿದೆ. ಅನ್ನ ಭಾಗ್ಯದಿಂದ ಗೃಹಲಕ್ಷ್ಮಿವರೆಗೆ ಎಲ್ಲಾ ಗ್ಯಾರಂಟಿಗಳಲ್ಲೂ ಕಾಂಗ್ರೆಸ್‌ ಸರಕಾರ ಜನರ ಕಣ್ಣಿಗೆ ಮಣ್ಣೆರಚಿ ಹಣ ಉಳಿಸುವ ತಂತ್ರಗಳನ್ನು ಅನುಸರಿಸುತ್ತಿದೆ. ಅಭಿವೃದ್ಧಿ ಯೋಜನೆಗಳನ್ನೆಲ್ಲಾ ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಜೊತೆಗೆ ಕೊಟ್ಟ ಮಾತನ್ನು ಈಡೇರಿಸದ ರಾಜ್ಯ ಏಟಿಎಂ ಸರಕಾರ ಕೇವಲ ಕಮಿಷನ್ ದಂಧೆ, ರಾಜ್ಯ ಲೂಟಿ, ದುಂದುವೆಚ್ಚ ದೊಂದಿಗೆ ಕಾಲಹರಣ ಮಾಡುತ್ತಾ ಜನತೆಗೆ ನಂಬಿಕೆ ದ್ರೋಹ ಎಸಗುತ್ತಿದೆ.

‘ಬಡತನ ಮುಕ್ತ ಭಾರತ’ದ ಗ್ಯಾರಂಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ 5 ವರ್ಷಗಳಲ್ಲಿ 13.5 ಕೋಟಿ ದೇಶವಾಸಿಗಳನ್ನು ಬಡತನದ ರೇಖೆಯಿಂದ ಮೇಲೆತ್ತಿದೆ. ಆದರೆ 10 ಕೆ.ಜಿ. ಉಚಿತ ಅಕ್ಕಿ ನೀಡುತ್ತೇವೆ ಎಂದು ಬೊಗಳೆ ಬಿಟ್ಟು ಅಧಿಕಾರಕ್ಕೇರಿದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಅಕ್ಕಿಯನ್ನು ನೀಡದೇ, ಇದೀಗ ಕೇಂದ್ರ ಸರಕಾರ ಆಹಾರ ಭದ್ರತಾ ಕಾಯ್ದೆಯಡಿ 5 ಕೆ.ಜಿ.ಯಂತೆ ನೀಡುತ್ತಿರುವ ಉಚಿತ ಅಕ್ಕಿಗೂ ಕನ್ನ ಹಾಕಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಪ್ರತೀ ತಿಂಗಳು ಅಧಿಕಾರಿಗಳಿಗೆ ಲಂಚ ನೀಡಲು ಗೋದಾಮಿನಿಂದ ಸಾವಿರಾರು ಕ್ವಿoಟಾಲ್ ಅಕ್ಕಿ ಕದ್ದು ಮಾರಾಟ ಮಾಡಿರುವುದಾಗಿ ಚೆನ್ನಪಟ್ಟಣದ ಟಿಎಪಿಸಿಎಂಎಸ್ ಗೋದಾಮಿನ ಸಿಬ್ಬಂದಿ ಸ್ವತಃ ಬಾಯಿ ಬಿಟ್ಟಿರುವುದು ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳು ಯಾವ ರೀತಿ ಹಳ್ಳ ಹಿಡಿದಿದೆ ಹಾಗೂ ಬಡವರ ಅನ್ನದಲ್ಲೂ ಕಾಂಗ್ರೆಸ್ ಸರಕಾರದ ಹೇಗೆ ಡೋಂಗಿತನ ಪ್ರದರ್ಶಿಸಿದೆ ಎಂಬುದು ರುಜುವಾತಾಗಿದೆ.

ಈ ಹಿಂದೆ ಲೋಕಾಯುಕ್ತಕ್ಕೇ ಎಳ್ಳು ನೀರು ಬಿಟ್ಟಿರುವ ಕುಖ್ಯಾತಿಗೆ ಪಾತ್ರರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಹೆಚ್ಚಿನ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವು ದು ಜಗಜ್ಜಾಹೀರಾಗಿದೆ. ಸರಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳು ಕಳೆದ ಬಳಿಕ ಎಚ್ಚೆತ್ತುಕೊಂಡು ಕೇವಲ ಪ್ರಚಾರಕ್ಕಾಗಿ ಬೂಟಾಟಿಕೆಯ ಜನಸ್ಪಂದನ ಕಾರ್ಯಕ್ರಮ ನಡೆಸಲಾಗಿದೆ. ಒಟ್ಟು ಸ್ವೀಕರಿಸಿದ 2,860 ಅರ್ಜಿಗಳಲ್ಲಿ 950 ಅರ್ಜಿಗಳನ್ನು ಮುಖ್ಯಮಂತ್ರಿಗಳು ನೇರವಾಗಿ ಸ್ವೀಕರಿಸಿದ್ದರೂ, ಸ್ಥಳದಲ್ಲಿ ಪರಿಹಾರ ದೊರೆತಿರುವುದು ಕೇವಲ 50 ಅರ್ಜಿಗಳಿಗೆ ಮಾತ್ರ ಎಂಬ ಅಂಶ ಬಯಲಾಗಿದೆ. ಇದು ಸರಕಾರದ ವಿರುದ್ಧ ಭುಗಿಲೆದ್ದಿರುವ ಜನಾಕ್ರೋಶವನ್ನು ತಣಿಸುವ ತಂತ್ರದ ಭಾಗವಾಗಿದೆ.

ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕಟ್ಟಡ ಸಾಮಗ್ರಿ ಸಾಗಾಟದ ಹಳೆಯ ಲಾರಿ, ಟೆಂಪೋಗಳ ಮಾಲಕರು ಪರವಾನಿಗೆ ನವೀಕರಿಸಿಯೇ ಸಾಗಾಟ ಪ್ರಕ್ರಿಯೆ ನಡೆಸಬೇಕೆಂಬ ಹೊಸ ಕಾನೂನನ್ನು ಪೊಲೀಸ್ ಇಲಾಖೆ ತುರ್ತಾಗಿ ಜಾರಿಗೆ ತಂದಿರುವುದು ಕೂಡ ರಾಜ್ಯ ಸರಕಾರ ವಸೂಲಿ ಮೂಲಕ ದುಡಿಯುವ ವರ್ಗಕ್ಕೆ ಬರೆ ಹಾಕುವ ಪ್ರಯತ್ನವಾಗಿದೆ. ಇದರ ಪರಿಣಾಮವಾಗಿ ನಡೆದ ನ್ಯಾಯಯುತ ಮುಷ್ಕರವನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಮುಂದಾಗಿರುವುದು ಹಾಗೂ ಈ ವಿಚಾರವನ್ನು ಕೆಡಿಪಿ ಪ್ರಶ್ನಿಸಿದ ಶಾಸಕರ ನಡೆಯನ್ನು ಕಾಂಗ್ರೆಸಿಗರು ಹತಾಶ ಮನೋಭಾವ ದಿಂದ ವಿರೋಧಿಸುವುದು ರಾಜ್ಯ ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿಗೆ ಹಿಡಿದ ಕೈಗನ್ನಡಿಯಾಗಿದೆಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!