ಸಪ್ತಪದಿ ಯೋಜನೆ ಅಲ್ಪಸಂಖ್ಯಾತರಿಗೂ ವಿಸ್ತರಿಸಲು ಸರಕಾರಕ್ಕೆ ಶಿಫಾರಸ್ಸು- ಅಬ್ದುಲ್ ಅಜೀಮ್
ಉಡುಪಿ, ನ.29: ರಾಜ್ಯ ಸರಕಾರವು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನೀಡುತ್ತಿರುವ ಅನುದಾನವನ್ನು ಸಾಕಾಗು ವುದಿಲ್ಲ. ಈ ವರ್ಷ ಕೇವಲ 2100 ಕೋಟಿ ರೂ. ಅನುದಾನ ಮೀಸಲಿರಿಸಿದೆ. ಮುಂದಿನ ಬಜೆಟ್‌ನಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಕನಿಷ್ಠ 5000ಕೋಟಿ ರೂ. ಅನುದಾನವನ್ನು ಮೀಸಲಿರಿಸ ಬೇಕು. ಇದರಿಂದ ಶೇ.75ರಷ್ಟು ಮಂದಿಗೆ ಯೋಜನೆ ತಲುಪಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿದ್ದಾರೆ.
ಆಯೋಗದ ವತಿಯಿಂದ ಉಡುಪಿ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಅಲ್ಪಸಂಖ್ಯಾತರ ಸಮುದಾಯದವರ ಕುಂದು ಕೊರತೆ ಸಭೆಯ ಬಳಿಕ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳಿಗೆ ಅರ್ಜಿ ಹಾಕುವ ವ್ಯವಸ್ಥೆಯನ್ನು ಸರಳೀಕರಣಗೊಳಿಸುವಂತೆ ಸಭೆಯಲ್ಲಿ ಮನವಿ ಮಾಡಲಾಗಿದೆ. ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ ಮಾಡಿದಾಗ ಸಾವಿರಾರು ಅರ್ಜಿಗಳು ಬರುತ್ತವೆ. ಆದರೆ ಇದರಲ್ಲಿ ಕೇವಲ 30-40 ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದುದರಿಂದ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಮನವಿ ಮಾಡಲಾಗುವುದು. ಇದರಿಂದ ಜನರಿಗೆ ಆಗುವ ತೊಂದರೆಯನ್ನು ದೂರ ಮಾಡಲಾಗುವುದು ಎಂದರು.
ಆರು ತಿಂಗಳಿಗೊಮ್ಮೆ ಸಭೆ
ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಅಲ್ಪಸಂಖ್ಯಾತರ ಕುಂದು ಕೊರತೆ ಸಭೆಯೇ ಕರೆದಿಲ್ಲ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆ ಮಾದರಿಯಲ್ಲಿ ಆರು ತಿಂಗಳಿಗೊಮ್ಮೆ ಅಲ್ಪ ಸಂಖ್ಯಾತರ ಕುಂದು ಕೊರತೆ ಸಭೆ ಕರೆಯಬೇಕು ಎಂಬ ಬೇಡಿಕೆ ಬಂದಿದೆ. ಇದರಿಂದ ಅಲ್ಪಸಂಖ್ಯಾತರ ಸಮಸ್ಯೆಗೆ ಪರಿಹಾರವಾಗ ಬಹುದು. ಈ ವಿಚಾರವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿನ ಮೇಲಾಧಿಕಾರಿಗಳನ್ನು ಬಿಟ್ಟರೆ ಕೆಳಸ್ತರದಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಾರತಮ್ಯ ಮಾಡಿ ತಪ್ಪು ಮಾಹಿತಿ ಯನ್ನು ಮೇಲಾಧಿಕಾರಿಗಳಿಗೆ ನೀಡುತ್ತಿದ್ದಾರೆ. ಇದರಿಂದ ಸಾಮಾನ್ಯ ಜನರಿಗೆ ತೀರಾ ತೊಂದರೆ ಆಗುತ್ತದೆ. ಇದರಿಂದ ಇಲಾಖೆಗೆ ಬಹಳಷ್ಟು ಕೆಟ್ಟ ಹೆಸರು ಬರುತ್ತಿದೆ. ಈ ವಿಚಾರವನ್ನು ಎಸ್ಪಿ ಜೊತೆ ಪ್ರಸ್ತಾಪ ಮಾಡಲಾಗುವುದು. ಆ ಮೂಲಕ ಪೊಲೀಸರು ಯಾವುದೇ ರೀತಿಯ ತಾರತಮ್ಯ ಮಾಡದೆ ಸಮಾನತೆಯಿಂದ ಕರ್ತವ್ಯ ನಿರ್ವಹಿಸಿ ಜನರ ಆತ್ಮವಿಶ್ವಾಸ ಗಳಿಸಬೇಕು ಎಂದು ಅವರು ಹೇಳಿದರು.
ಖಬರಸ್ತಾನಕ್ಕೆ ಸರಕಾರಿ ಭೂಮಿ
ಜಿಲ್ಲೆಯ ಮಸೀದಿಗಳ ಖಬರಸ್ತಾನಕ್ಕೆ ಸಂಬಂಧಿಸಿ 10 ಅರ್ಜಿಗಳು ಬಾಕಿ ಇವೆ. ಖಬರಸ್ತಾನಕ್ಕಾಗಿ ಸರಕಾರಿ ಜಾಗ ಇಲ್ಲದೆ ಕಡೆ ಖಾಸಗಿಯವರಿಂದ ಭೂಮಿ ಖರೀದಿಸಲು ಅವಕಾಶ ಇದೆ. ಆದರೆ ಇಲ್ಲಿ ಭೂಮಿ ಮಾರಾಟ ಮಾಡಲು ಯಾರು ಸಿದ್ಧ ಇರುವುದಿಲ್ಲ. ಆದುದರಿಂದ ಮೂರು ಗ್ರಾಮದವರು ಸೇರಿ ಒಂದು ಕಡೆ ಸರಕಾರಿ ಭೂಮಿ ಗುರುತಿಸಿ ಅಲ್ಲಿಯೇ ಖಬರಸ್ತಾವನ್ನು ಮಾಡುವಂತೆ ಸಲಹೆ ನೀಡಿದ್ದೇನೆ ಎಂದು ಅವರು ತಿಳಿಸಿದರು.
ಅಲ್ಪಸಂಖ್ಯಾತರ ಸ್ವಸಹಾಯ ಸಂಘಗಳಿಗೆ ನೀಡುವ ಕಿರುಸಾಲವನ್ನು ಸರಕಾರ ಸ್ಥಗಿತಗೊಳಿಸಿದ್ದು, ಇದನ್ನು ಮತ್ತೆ ಆರಂಭಿಸುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡ ಲಾಗುವುದು. ಯೋಜನೆಗೆ ಸಂಬಂಧಿಸಿ ಹೆಚ್ಚಿನ ಅರ್ಜಿಗಳು ಬಂದರೆ ಲಾಟರಿ ಮೂಲಕ ಫಲಾನುಭ ವಿಗಳನ್ನು ಆಯ್ಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸ ಲಾಗುವುದು ಎಂದು ಅವರು ಹೇಳಿದರು.
‘ಸಪ್ತಪದಿ ಯೋಜನೆ ಅಲ್ಪಸಂಖ್ಯಾತರಿಗೆ ವಿಸ್ತರಿಸಿ’
ಈ ಹಿಂದೆ ಅಲ್ಪಸಂಖ್ಯಾತರಿಗೆ ಜಾರಿಗೆ ತಂದಿದ್ದ ಶಾದಿಭಾಗ್ಯ ಯೋಜನೆ ಈಗ ಸ್ಥಗಿತಗೊಂಡಿದೆ. ಆದುದರಿಂದ ಬಡವರಿಗೆ ಮದುವೆ ಸಂದರ್ಭದಲ್ಲಿ ಸಹಾಯ ಮಾಡುವ ಯೋಜನೆಯನ್ನು ಸರಕಾರ ಜಾರಿಗೆ ತರಬೇಕು. ಅದಕ್ಕಾಗಿ ಹಿಂದೂಗಳಿಗೆ ಧಾರ್ಮಿಕ ದತ್ತಿ ಇಲಾಖೆಯಲ್ಲಿರುವ ಸಪ್ತಪದಿ ಯೋಜನೆಯನ್ನು ಅಲ್ಪಸಂಖ್ಯಾತರಿಗೂ ವಿಸ್ತರಿಸಿ 50ಸಾವಿರ ರೂ. ಸಹಾಯಧನ ನೀಡಬೇಕು. ಈ ಕುರಿತು ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ತಿಳಿಸಿದರು.
ಅರಿವು ಯೋಜನೆಯಡಿ ಕೇವಲ ಇಂಜಿನಿಯರ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿ ವೇತನ ದೊರೆಯುತ್ತಿದ್ದು, ಅದರಲ್ಲಿ ಪ್ಯಾರಾ ಮೆಡಿಕಲ್, ನರ್ಸಿಂಗ್, ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಗಳಿಗೆ ವಿದ್ಯಾರ್ಥಿವೇತನ ನೀಡುವ ನಿಟ್ಟಿನಲ್ಲಿ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ವಿಶೇಷ ಅಧಿಕಾರಿ ಮುಜಿಬುಲ್ಲ ಜಫಾರಿ, ಉಡುಪಿ ಜಿಲ್ಲಾ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷ ಅಬ್ದುಲ್ ಮುತ್ತಾಲಿಬ್, ಮಾಜಿ ಅಧ್ಯಕ್ಷ ಯಾಹ್ಯಾ ನಕ್ವಾ, ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿ ಪೂರ್ಣಿಮಾ ಚೂರಿ, ವಕ್ಫ್ ಅಧಿಕಾರಿ ಹಂಝತ್, ಮುಖಂಡರಾದ ಮುಸ್ತಾಕ್ ಅಹಮದ್, ಜಾಹಿರ್ ನಾಕುದ, ಹುಸೈನ್ ಹೈಕಾಡಿ, ಎಂ.ಪಿ.ಮೊದಿನಬ್ಬ, ಸಲೀಂ ಅಂಬಾಗಿಲು, ಕೆ.ಪಿ.ಇಬ್ರಾಹಿಂ, ಮುಹಮ್ಮದ್ ಮೌಲಾ, ನಾಝಿಯಾ, ಶೇಕ್ ಆಸೀಫ್ ಕಟಪಾಡಿ, ಆದಂ ಗುಲ್ವಾಡಿ ಮೊದಲಾದವರು ಉಪಸ್ಥಿತರಿದ್ದರು.