ಉಡುಪಿ: ಡಿ.2-3 ರಂದು 6ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧಾಕೂಟ

ಉಡುಪಿ, ನ.29: ಕುಬುಡೋ ಬುಡೋಕಾನ್ ಕರಾಟೆ ಡೋ ಅಸೋಸಿಯೇಷನ್ ಕರ್ನಾಟಕದ ವತಿಯಿಂದ ಆರನೇ ರಾಷ್ಟ್ರಮಟ್ಟದ ಆಹ್ವಾನಿತ ತಂಡಗಳ ಕರಾಟೆ ಸ್ಪರ್ಧಾಕೂಟ ‘ಕರಾವಳಿ ಕರಾಟೆ ಚಾಂಪಿಯನ್‌ಷಿಪ್- 2023’ ಡಿ.2 ಮತ್ತು 3ರಂದು ಹಿರಿಯಡ್ಕದ ಶ್ರೀವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಂತೋಷ ಸುವರ್ಣ ಬೊಳ್ಜೆ ತಿಳಿಸಿದ್ದಾರೆ.

ಉಡುಪಿಯ ಪ್ರೆಸ್ ಕ್ಲಬ್‌ನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತೋಷ್ ಸುವರ್ಣ ಬೊಳ್ಜೆ, ಕೇರಳ, ಮುಂಬಯಿ, ಗೋವಾ ಸೇರಿದಂತೆ ವಿವಿದೆಡೆಯಿಂದ 2500ಕ್ಕೂ ಅಧಿಕ ಕರಾಟೆ ಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ಒಂದು ಸಾವಿರಕ್ಕೂ ಅಧಿಕ ಮಂದಿ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದವರು ಹೇಳಿದರು.

12ವರ್ಷದೊಳಗಿನ ಮಕ್ಕಳಿಗೆ ಜೂನಿಯರ್ ಹಾಗೂ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸೀನಿಯರ್ ಎಂಬ ಎರಡು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ. ಮೊದಲ ದಿನದಂದು 12 ವರ್ಷದೊಳಗಿನ ಮಕ್ಕಳಿಗೆ ಸ್ಪರ್ಧೆಗಳು ನಡೆದರೆ, ಎರಡನೇ ದಿನದಂದು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸ್ಪರ್ಧೆಗಳು ನಡೆಯಲಿವೆ ಎಂದರು.

ಈ ಬಾರಿ 2500 ಸ್ಪರ್ಧಿಗಳು ಮಾತ್ರವಲ್ಲದೇ, 200ಕ್ಕೂ ಅಧಿಕ ತೀರ್ಪುಗಾರರು ಹಾಗೂ ಸ್ಪರ್ಧಿಗಳ ಹೆತ್ತವರು ಸಹ ಪಾಲ್ಗೊಳ್ಳಲಿದ್ದಾರೆ ಎಂದ ಅವರು, ಎಲ್ಲರಿಗೂ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗುವುದು ಎಂದರು.

ಕರಾಟೆ ಚಾಂಪಿಯನ್‌ಷಿಪ್‌ನ್ನು ಡಿ.2ರಂದು ಬೆಳಗ್ಗೆ 9:00ಗಂಟೆಗೆ ಉಡುಪಿ ಶೀರೂರು ಮಠದ ಶ್ರೀ ವೇದವರ್ದನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಅಂಬಲಪಾಡಿ ಶ್ರೀಮಹಾಕಾಳಿ ಹಾಗೂ ಜನಾರ್ದನ ದೇವಸ್ಥಾನದ ಧರ್ಮದರ್ಶಿ ಡಾ.ಎನ್.ಬಿ. ವಿಜಯ ಬಲ್ಲಾಳ್ ಉದ್ಘಾಟಿಸಲಿದ್ದಾರೆ. ಹಿರಿಯಡ್ಕದ ಉದ್ಯಮಿ ಕೆ.ನಟರಾಜ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕಾರ್ಕಳ ಶಾಸಕ ವಿ.ಸುನಿಲ್‌ ಕುಮಾರ್, ಉದ್ಯಮಿ ಸತ್ಯೇಂದ್ರ ಪೈ, ತುಳು ಚಿತ್ರ ನಟ ಹಾಗೂ ನಿರ್ದೇಶಕ ಅರ್ಜುನ ಕಾಪಿಕಾಡ್ ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದು ಸಂತೋಷ ಸುವರ್ಣ ತಿಳಿಸಿದರು.

ಎರಡನೇ ದಿನಗಳ ಸ್ಪರ್ಧೆಗಳನ್ನು ಡಿ.3ರ ಬೆಳಗ್ಗೆ 9ಗಂಟೆಗೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ ಮಧ್ವರಾಜ್, ಉದ್ಯಮಿಗಳಾದ ಸಂತೋಷ ವಾಗ್ಳೆ, ದೇವೇಂದ್ರ ವಾಗ್ಳೆ, ಡಾ.ರೋಶನ್‌ಕುಮಾರ್ ಶೆಟ್ಟಿ, ಮಹೇಶ್ ಠಾಕೂರ್ ಮುಂತಾದವರು ಭಾಗವಹಿಸಲಿದ್ದಾರೆ.

ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ಸಂಜೆ 6:00 ಗಂಟೆಗೆ ಹಿರಿಯಡ್ಕದ ಉದ್ಯಮಿ ರಾಜಾರಾಮ್ ಹೆಗಡೆ ಅಧ್ಯಕ್ಷತೆಯಲ್ಲಿ ನಡೆಯಲಿದೆ. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ಸುರೇಶ್ ನಾಯಕ್ ಕುಯಿಲಾಡಿ, ಅನಿಲ್ ಶೆಟ್ಟಿ, ಸೋಮನಾಥ ಹೆಗ್ಡೆ, ದಿನೇಶ್ ಕೊಡವೂರು ಮುಂತಾದವರು ಅತಿಥಿ ಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಶಿಕ್ಷಕ ರವಿಕುಮಾರ್ ಉದ್ಯಾವರ, ಉಪಾಧ್ಯಕ್ಷ ಉಮೇಶ್ ಕರ್ಕೇರ, ಸ್ಪರ್ಧೆಯ ಸಂಘಟಕ ಸೋಮನಾಥ ಸುವರ್ಣ ಹಾಗೂ ವಿಜಯಲಕ್ಷ್ಮೀ ನಾಯಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!