KDP ಸಭೆಯಲ್ಲಿ ಅಧಿಕಾರಿಯ ಮೌಲ್ಯ ಮಾಪನ: ಸುನೀಲ್ ಕುಮಾರ್‌ರದ್ದು ಅಪ್ರಜಾಸತ್ತಾತ್ಮಕ ನಿಲುವು- ಕೊಡವೂರು

ಉಡುಪಿ: ಜಿಲ್ಲಾ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ರವರ ಸಮ್ಮುಖದಲ್ಲಿ ಶಾಸಕ ಸುನೀಲ್ ಕುಮಾರ್ ರವರು ಜಿಲ್ಲಾ ಎಸ್ಪಿಯವರ ಮೇಲೆ ಕ್ಷುಲ್ಲಕ ಕಾರಣಹೊರಿಸಿ ಹರಿಹಾಯ್ದ ಅಸಾಂವಿಧಾನಿಕ ನಡೆಯ ಹಿಂದೆ ಪೂರ್ವನಿಯೋಜಿತ ಸಂಚು ಅಡಗಿದೆ. ಇದನ್ನು ತಿಳಿದೇ ಸಚಿವೆಯವರು ಎಸ್ಪಿಯವರನ್ನು ಸುಮ್ಮನಿರಲು ಹೇಳಿದ್ದಾರೆ.

ಇದರ ಹಿಂದೆ ಕೆಸರಿನೊಂದಿಗೆ ಹೊಡೆದಾಟ ಸಲ್ಲ ಎಂಬ ಸೂಕ್ಷ್ಮ ಸಂದೇಶ ಅಡಗಿದೆ. ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಅನ್ಯತಾ ಅರ್ಥವಿಸಲಾಗದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.

ಇಲಾಖಾ ಮಾರ್ಗಸೂಚಿ ನಿಯಮವನ್ನು ಮೀರಿದ ಮತ್ತು ಇಲಾಖೆಯ ಕಾನೂನಾತ್ಮಕ ನಿಯಮಾನುಸಾರ ದಡಿಯಲ್ಲಿ ಅನಗತ್ಯವೆಂದು ಪರಿಗಣಿಸಲ್ಪಟ್ಟ ಪ್ರತಿಭಟನೆಗಳನ್ನು ಇಲಾಖಾ ಹದ್ದು ಬಸ್ತಿನೊಳಪಡಿ ಸುವುದು ಇಲಾಖಾಧಿಕಾರಿಗಳ ಆಧ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅಭಿವೃದ್ದಿಯ ಮೌಲ್ಯ ಮಾಪನ ಮಾಡಬೇಕಾದ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಅಧಿಕಾರಿಯೊಬ್ಬರ ಮೌಲ್ಯ ಮಾಪನಕ್ಕಿಳಿದ ಸುನೀಲ್ ಕುಮಾರ್ ರವರದ್ದು ಅಪ್ರಜಾಸತ್ತಾತ್ಮಕ ನಿಲುವಾಗಿದೆ.

ಬಹುಶ ತನ್ನ ಅಧಿಕಾರಾವಧಿಯಲ್ಲಿ ಕಾನೂನನ್ನು ಕೈಗೆತ್ತಿ ಬಾಲಬಿಚ್ಚಿ ಮೆರೆಯುತ್ತಿದ್ದ ತನ್ನ ಹಿಂಬಾಲಕರ ಬಾಲವನ್ನು ಈಗಿನ ಸರಕಾರದ ಅಧಿಕಾರಿಗಳು ಕಾನೂನಿನ ಕುಣಿಕೆಯಡಿಯಲ್ಲಿ ಬಿಗಿದು ಬಂದಿಸುತ್ತಿರುವುದನ್ನು ಕಂಡು ಸುನೀಲ್ ಕುಮಾರ್ ಹತಾಶರಾಗಿದ್ದಾರೆ. ಪ್ರಕೃತಿಯನ್ನೆ ದೋಚಲು ಹೊರಟು ತಮ್ಮ ಠಂಕಸಾಲೆಯನ್ನು ಭದ್ರಪಡಿಸಿ ಹೊಂಕರಿಸ ಹೊರಟವರಿಗೆ ಪರೋಕ್ಷ ಮುಖಭಂಗವಾಗಿದೆ.

ಒಬ್ಬ ಉನ್ನತ ಶ್ರೇಣಿಯ ಅಧಿಕಾರಿಯಾಗಿ ಸಭೆಯಲ್ಲಿ ವಾಸ್ತವ ವಿಷಯದ ವಿವರಣೆಯನ್ನಷ್ಟೆ ಕೊಟ್ಟು ಸಚಿವರ ಆದೇಶವನ್ನು ಪಾಲಿಸಿ ಸುಮ್ಮನಾಗಿ ಎಸ್ಪಿ ಯವರು ತನ್ನ ಹುದ್ದೆಯ ಗೌರವವನ್ನು ಎತ್ತಿ ಹಿಡಿದಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!