ಹೆಸರಾಂತ ಆಭರಣ ಮಳಿಗೆಗೆ ಕೋಟ್ಯಾಂತರ ರೂ.ಮೌಲ್ಯದ ಚಿನ್ನಾಭರಣ ವಂಚಿಸಿದ ಸಹೋದರರು
ಬೈಂದೂರು: ಇಲ್ಲಿನ ಹೆಸರಾಂತ ಚಿನ್ನಾಭರಣ ಮಳಿಗೆಗೆ ಸಿಬ್ಬಂದಿಯು ತನ್ನ ಇಬ್ಬರು ಸಹೋದರರೊಂದಿಗೆ ಸೇರಿಕೊಂಡು ಸಂಸ್ಥೆಗೆ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ವಂಚಿಸಿದ ಬಗ್ಗೆ ಬೈಂದೂರು ಠಾಣೆಯಲ್ಲಿ ದಾಖಲಾಗಿದೆ.
ಉಪ್ಪುಂದ ಅಂಬಾಗಿಲಿನ ಮಾರುತಿ ಗೋಲ್ಡ್ ಜ್ಯುವೆಲ್ಲರ್ಸ್ನ ಸಿಬ್ಬಂದಿ ಗಿರೀಶ್ ಶೇಟ್(41) ವಂಚಿಸಿದ ಆರೋಪಿ. ಇತ ತನ್ನ ಸಹೋದರರಾದ ವೆಂಕಟೇಶ್ ಶೇಟ್ (44) ಮತ್ತು ಹರೀಶ್ ಶೇಟ್ (35) ಸೇರಿ ರೂ.10ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ವಂಚನೆ ಮಾಡಿದ್ದಾಗಿ ಸಂಸ್ಥೆಯ ಮಾಲಕ ನಿತ್ಯಾನಂದ ಶೇಟ್ ದೂರು ನೀಡಿದ್ದಾರೆ.
ಗಿರೀಶ್ ಶೇಟ್ ಏಪ್ರಿಲ್ 2019ರಿಂದ ಡಿಸೆಂಬರ್ 2021ರ ಅವಧಿಯಲ್ಲಿ ಸಂಸ್ಥೆಯ ಚಿನ್ನಾಭರಣ ಕದ್ದು ಇಬ್ಬರು ಸಹೋದರ ಮುಖಾಂತರ ವಿವಿಧ ಬ್ಯಾಂಕ್, ಸಹಕಾರಿ ಸಂಘಗಳಲ್ಲಿ ಗಿರಿವಿಟ್ಟು ಬಳಿಕ ಅದನ್ನು ಬಿಡಿಸಿಕೊಂಡು ಇತರರಿಗೆ ಮಾರಾಟ ಮಾಡುತ್ತಿದ್ದರು.
ಈ ಬಗ್ಗೆ ಸಂಶಯಗೊಂಡ ಮಾಲಕ ನಿತ್ಯಾನಂದ ಶೇಟ್ ಅವರು ಚಿನ್ನಾಭರಣಗಳ ಸ್ಟಾಕ್ ಪರಿಶೀಲಿಸಿದಾಗ 10 ಕೋಟಿ ಮೌಲ್ಯದ ಆಭರಣ ನಾಪತ್ತೆಯಾಗಿತ್ತು. ಸಿಬ್ಬಂದಿ ಗಿರೀಶ್ ಶೇಟ್ ವಿರುದ್ಧ ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದರು.
ತನಿಖೆ ಕೈಗೆತ್ತಿಕೊಂಡ ಬೈಂದೂರು ಪೊಲೀಸರು ಆರೋಪಿಯಿಂದ ಒಂದು ಕೆಜಿ ಚಿನ್ನಾಭರಣ ವಶಕ್ಕೆ ಪಡೆದಿದ್ದರು. ಈ ನಡುವೆ ಸಂಸ್ಥೆಯ ಸಿಬ್ಬಂದಿ ಎಂದು ನಂಬಿಸಿ ಮತ್ತೆ ಗ್ರಾಹಕರಿಂದ 34.5ಲಕ್ಷ ರೂ. ಸಂಗ್ರಹಿಸಿ ಗಿರೀಶ್ ಶೇಟ್ ವಂಚಿಸಿದ್ದರು, ಈ ಬಗ್ಗೆ ಮಾರುತಿ ಗೋಲ್ಡ್ ಜುವೆಲ್ಲರಸ್ ಮಾಲಕ ನಿತ್ಯಾನಂದ ಶೇಟ್ ಮತ್ತೊಂದು ವಂಚನೆ ಕೇಸು ದಾಖಲಿಸಿದ್ದಾರೆ.