ನ.29 ರಿಂದ ಜ.5: ಕಿಶೋರ ಯಕ್ಷಗಾನ ಸಂಭ್ರಮ- 69 ಶಾಲೆಗಳ ಪ್ರದರ್ಶನ

ಉಡುಪಿ, ನ.25: ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ವಿವಿಧ ಸಂಘಸಂಸ್ಥೆ ಹಾಗೂ ಸಂಘಟನೆಗಳ ನೆರವಿನೊಂದಿಗೆ ಆಯೋಜಿಸುತ್ತಿರುವ ಪ್ರೌಢಶಾಲಾ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ ‘ಕಿಶೋರ ಯಕ್ಷಗಾನ ಸಂಭ್ರಮ’ ಈ ಬಾರಿ ಕುಂದಾಪುರ ಹಾಗೂ ಕಾಪು ಕ್ಷೇತ್ರಗಳಿಗೂ ವಿಸ್ತರಿಸಿದ್ದು, ಒಟ್ಟು 69 ಶಾಲೆಗಳ ತಂಡಗಳು ಈ ಬಾರಿ ಪ್ರದರ್ಶನ ನೀಡಲಿವೆ ಎಂದು ಉಡುಪಿ ಶಾಸಕ,ಟ್ರಸ್ಟ್‌ನ ಅಧ್ಯಕ್ಷರಾಗಿರುವ ಶಾಸಕ ಯಶಪಾಲ್ ಸುವರ್ಣ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2007ರಲ್ಲಿ ಉಡುಪಿ ವಿಧಾನಸಭಾ ವ್ಯಾಪ್ತಿಯ ಉಡುಪಿ ಮತ್ತು ಬ್ರಹ್ಮಾವರ ಪ್ರೌಢ ಶಾಲೆಗಳ ವಿದ್ಯಾರ್ಥಿ ತಂಡಗಳಿಗಾಗಿ ಪ್ರಾರಂಭ ಗೊಂಡ ಈ ಯಕ್ಷಗಾನ ಪ್ರದರ್ಶನ ತುಂಬಾ ಜನಪ್ರಿಯ ಗೊಂಡಿದ್ದು, ಇದೀಗ ಜಿಲ್ಲೆಗೆ ವಿಸ್ತರಿಸುತ್ತಿದೆ ಎಂದರು.

ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣದೊಂದಿಗೆ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ಯಕ್ಷ ಶಿಕ್ಷಣವು ಕಾಪು ಮತ್ತು ಕುಂದಾಪುರ ವಿಧಾನ ಸಭಾ ಕ್ಷೇತ್ರಗಳಿಗೂ ವಿಸ್ತರಿಸಿದೆ. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಕುಂದಾಪುರ ಶಾಸಕ ಕಿರಣ್‌ ಕುಮಾರ ಕೊಡ್ಗಿ ಅವರ ಒತ್ತಾಸೆಯಂತೆ ಅಲ್ಲಿನ ಶಾಲೆಗಳಲ್ಲೂ ಯಕ್ಷ ಶಿಕ್ಷಣವನ್ನು ಪ್ರಾರಂಭಿಸಲಾಗಿದೆ ಎಂದರು.

2023ನೇ ಸಾಲಿನ ಕಿಶೋರ ಯಕ್ಷಗಾನ ಸಂಭ್ರಮ ನ.29ರಿಂದ 2024ರ ಜನವರಿ 5ರವರೆಗೆ ನಡೆಯಲಿದೆ. ಬ್ರಹ್ಮಾವರ ಬಂಟರ ಭವನದ ಬಳಿಕ ನ.29ರಿಂದ ಡಿ.6 ರವರೆಗೆ, ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಡಿ.7 ರಿಂದ 20ರವರೆಗೆ, ಕಾಪು ಶ್ರೀಲಕ್ಷ್ಮೀಜನಾರ್ದನ ದೇವಸ್ಥಾನದ ಬಳಿ ಡಿ.21ರಿಂದ 24ರವರೆಗೆ, ಶಿರ್ವದ ಮಹಿಳಾ ಸೌಧದಲ್ಲಿ ಡಿ.25ರಿಂದ 29ರವರೆಗೆ, ಮಣೂರು ಪಡುಕೆರೆಯ ಸರಕಾರಿ ಸಂಯುಕ್ತ ಪ್ರೌಢ ಶಾಲಾ ವಠಾರದಲ್ಲಿ ಡಿ.30ರಿಂದ ಜ.1ರವರೆಗೆ ಹಾಗೂ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ಜ.3ರಿಂದ 5ರವರೆಗೆ ಯಕ್ಷಗಾನ ಪ್ರದರ್ಶನವಿರುತ್ತದೆ ಎಂದರು.

ಈ ಬಾರಿ ಒಟ್ಟು 31 ಮಂದಿ ಯಕ್ಷಗಾನ ಗುರುಗಳು 69 ಶಾಲೆಗಳಲ್ಲಿ 70 ತಂಡಗಳಿಗೆ ಯಕ್ಷಗಾನ ಕಲಿಸಿದ್ದಾರೆ. ಬಾಲಕಿ ಯರು ಬಾಲಕರಿಗಿಂತ ಅಧಿಕ ಸಂಖ್ಯೆಯಲ್ಲಿ ದ್ದಾರೆ. ಜಾತಿ,ಮತ, ಲಿಂಗ ಬೇಧವಿಲ್ಲದೇ ಸುಮಾರು 3000 ಮಂದಿ ವಿದ್ಯಾರ್ಥಿಗಳು ಯಕ್ಷ ಶಿಕ್ಷಣ ಪಡೆದು ವೇಷ ಧರಿಸಿ ಪ್ರದರ್ಶನ ನೀಡಲಿದ್ದಾರೆ ಎಂದು ಯಶ್‌ಪಾಲ್ ಸುವರ್ಣ ವಿವರಿಸಿದರು.

ಈ ಅಭಿಯಾನದ ಉದ್ಘಾಟನಾ ಸಮಾರಂಭ ನ.29ರ ಬುಧವಾರ ಸಂಜೆ 6:30ಕ್ಕೆ ನಡೆಯಲಿದೆ. ಮೊದಲ ದಿನವನ್ನು ಹೊರತು ಪಡಿಸಿ ಉಳಿದೆಲ್ಲಾ ದಿನಗಳಂದು ತಲಾ ಒಂದೂವರೆ ಗಂಟೆಗಳ ಎರಡು ಪ್ರದರ್ಶನಗಳು ಇರುತ್ತವೆ. ಕೋಟೇಶ್ವ ರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಎರಡು ತಂಡಗಳು -ಬಾಲಕ ಹಾಗೂ ಬಾಲಕಿಯರ- ಪ್ರದರ್ಶನ ನೀಡಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ಮುರಲಿ ಕಡೆಕಾರ್ , ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್, ಎಸ್.ವಿ. ಭಟ್, ಪ್ರೊ.ನಾರಾಯಣ ಹೆಗಡೆ, ಶೃಂಗೇಶ್ವರ್, ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!