ರೂಬಿಕ್ ಕ್ಯೂಬ್: 2 ಗಿನ್ನೆಸ್ ವಿಶ್ವ ದಾಖಲೆ ಪ್ರಯತ್ನದಲ್ಲಿ ಹಟ್ಟಿಯಂಗಡಿ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳು
ಉಡುಪಿ, ನ.25: ರಜತ ಮಹೋತ್ಸವದ ಸಂಭ್ರಮದಲ್ಲಿರುವ ಹಟ್ಟಿಯಂಗಡಿಯ ಶ್ರೀಸಿದ್ಧವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳು ಇದೀಗ ರೂಬಿಕ್ಸ್ ಕ್ಯೂಬ್ ಮೊಸಾಯಿಕ್ಸ್ ಮೂಲಕ ಎರಡು ಹೊಸ ಗಿನ್ನೆಸ್ ವಿಶ್ವ ದಾಖಲೆಗಳನ್ನು ಬರೆಯಲು ನ.30ರಿಂದ ಡಿ.3ರವರೆಗೆ ಪ್ರಯತ್ನ ನಡೆಸಲಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರಾದ ಶರಣ್ ಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶರಣ್ ಕುಮಾರ್, ಕಳೆದ 25 ವರ್ಷಗಳಿಂದ ಶೈಕ್ಷಣಿಕ ಉತ್ಕೃಷ್ಟತೆಯೊಂದಿಗೆ ವಿದ್ಯಾರ್ಥಿಗಳು ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರವಾಗಿರುವ ತಮ್ಮ ವಿದ್ಯಾಸಂಸ್ಥೆ, ರಜತ ಮಹೋತ್ಸವವನ್ನು ಸ್ಮರಣೀಯಗೊಳಿಸಲು ಗಿನ್ನೆಸ್ ವಿಶ್ವ ದಾಖಲೆಯ ಪ್ರಯತ್ನಕ್ಕೆ ಮುಂದಾಗಿದೆ ಎಂದರು.
ರೂಬಿಕ್ ಕ್ಯೂಬ್‌ನಲ್ಲಿ ವಿಶೇಷ ಸಾಧನೆ ಮಾಡಿರುವ ಇಂಡಿಯನ್ ಸ್ಪೀಡ್ ಕ್ಯೂಬರ್ ಹಾಗೂ ಮೊಸಾಯಿಕ್ಸ್ ಆರ್ಟಿಸ್ಟ್ ಆಗಿರುವ ಪೃಥ್ವೀಶ್ ಕೆ.ಭಟ್ ಅವರ ಮೂಲಕ ನಮ್ಮ ಶಾಲೆಯಲ್ಲಿ ಕಲಿಯುತ್ತಿರುವ 1700 ವಿದ್ಯಾರ್ಥಿಗಳ ಪೈಕಿ ಐದನೇ ತರಗತಿಯಿಂದ ಮೇಲಿನ 1200 ವಿದ್ಯಾರ್ಥಿಗಳು ರೂಬಿಕ್ ಕ್ಯೂಬ್‌ನಲ್ಲಿ ಹೊಸ ದಾಖಲೆಗೆ ಮುಂದಾಗಲಿದ್ದಾರೆ ಎಂದು ಅವರು ತಿಳಿಸಿದರು. ಇದಕ್ಕಾಗಿ ಶಾಲೆಯ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈಗಾಗಲೇ ತರಬೇತಿಯನ್ನು ಪಡೆದಿದ್ದಾರೆ ಎಂದರು.
ಮೊದಲ ದಾಖಲೆ: ನ.30 ರಿಂದ ಡಿ.3ರವರೆಗೆ 1000 ಕ್ಕೂ ಅಧಿಕ ವಿದ್ಯಾರ್ಥಿಗಳು ಈಗಾಗಲೇ ರೂಬಿಕ್ ಕ್ಯೂಬ್‌ನಲ್ಲಿ ಸ್ಥಾಪಿಸಲಾಗಿರುವ ಎರಡು ವಿಶ್ವ ದಾಖಲೆಗಳನ್ನು ಮುರಿಯಲು ಪ್ರಯತ್ನಿಸಲಿದ್ದಾರೆ. ಮೊದಲ ದಾಖಲೆ ‘ಅತಿ ದೊಡ್ಡ ಡ್ಯುಯಲ್-ಸೈಡೆಡ್ ರೊಟೇಟಿಂಗ್ ಫಸಲ್ ಕ್ಯೂಬ್ ಮೊಯಾಯಿಕ್ ಚಿತ್ರ ಬಿಡಿಸುವುದಾಗಿದೆ. ಇದರಲ್ಲಿ 5600ಕ್ಕೂ ಅಧಿಕ ಕ್ಯೂಬ್‌ಗಳ ಮೂಲಕ 16.2 ಚದರ ಮೀ. ಅಳತೆಯಲ್ಲಿ ರೂಬಿಕ್ ಕ್ಯೂಬ್‌ನ ಎರಡು ಬದಿಯಲ್ಲಿ ಒಮ್ಮೆಗೇ ಭಾರತದ ಹಾಕಿ ಲೆಜೆಂಡ್ ಮೇಜರ್ ಧ್ಯಾನ್‌ಚಂದ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಚಿತ್ರವನ್ನು ರಚಿಸಲಾಗುವುದು ಎಂದು ಪೃಥ್ವೀಶ್ ಭಟ್ ತಿಳಿಸಿದರು.
ಇದರಲ್ಲಿ ಈಗಿನ ಗಿನ್ನೆಸ್ ದಾಖಲೆ ಇರುವುದು ಕಝಾಕಿಸ್ತಾನದ ಝೆಂಗಿಸ್ ಐಟ್ಜಾನೋವ್ ಅವರು 5100 ಕ್ಯೂಬ್‌ಗಳಿಂದ 15.878 ಚ.ಮೀ. ಅಳತೆಯಲ್ಲಿ ಕ್ಯೂಬ್‌ನ ಎರಡು ಕಡೆ ರಚಿಸಿದ ಚಿತ್ರಗಳದ್ದು. ಇದನ್ನು ನಮ್ಮ ಮಕ್ಕಳು ಮುರಿಯಲಿದ್ದಾರೆ. ಇಲ್ಲಿ ಚಿತ್ರದ ಅಳತೆ ಮಾತ್ರ ಪರಿಗಣನೆಗೆ ಬರುತ್ತದೆ. ಉಳಿದಂತೆ ತೆಗೆದುಕೊಂಡ ಸಮಯ, ಎಷ್ಟು ಮಂದಿ ಇದ್ದರು ಎಂಬುದು ಗಣನೆಗೆ ಬಾರದು. ಇದು ನ.30 ಹಾಗೂ ಡಿ.1ರಂದು ಬೆಳಗ್ಗೆ 8:00ರಿಂದ ಸಂಜೆ 5ರವರೆಗೆ ನಡೆಯಲಿದೆ ಎಂದವರು ಹೇಳಿದರು.
ಎರಡನೇ ದಾಖಲೆ: ತಿರುಗುವ ಪಜಲ್ ಕ್ಯೂಬ್ ಮೊಸಾಯಿಕ್‌ಗೆ ಅತಿ ಹೆಚ್ಚು ಮಂದಿ ಪಾಲ್ಗೊಳ್ಳುವ ದಾಖಲೆ. ಸದ್ಯ ಇರುವ ಗಿನ್ನೆಸ್ ದಾಖಲೆ ಬ್ರಿಟನ್‌ನ ಲಂಡನ್‌ನಲ್ಲಿ ರೂಬಿಕ್ಸ್ ಬ್ರಾಂಡ್ ಲಿಮಿಟೆಡ್ 308 ಜನರ ಪಾಲ್ಗೊಳ್ಳುವಿಕೆಯಲ್ಲಿ ರಚಿಸಿದ ಚಿತ್ರವಿದೆ. ನಮ್ಮಲ್ಲಿ ಡಿ.2 ಮತ್ತು 3ರಂದು ಸುಮಾರು 1200 ಮಂದಿ ಪಾಲ್ಗೊಳ್ಳುವಿಕೆಯಲ್ಲಿ ರೊಟೇಟಿಂಗ್ ಫಸಲ್ ಕ್ಯೂಬ್ ಮೊಸಾಯಿಕ್‌ನಲ್ಲಿ ಸಿದ್ಧಿವಿನಾಯಕ ವಸತಿ ಶಾಲೆಯ ಸಂಸ್ಥಾಪಕರಾದ ವೇದಮೂರ್ತಿ ಎಚ್. ರಾಮಚಂದ್ರ ಭಟ್ ಅವರ ಚಿತ್ರವನ್ನು ರಚಿಸಲಾಗುತ್ತದೆ ಎಂದು ಪೃಥ್ವೀಶ್ ಭಟ್ ತಿಳಿಸಿದರು.
ಗಿನ್ನೆಸ್ ವಿಶ್ವ ದಾಖಲೆಯ ಬಳಿಕ ಬಳಸಲಾಗುವ ರೂಬಿಕ್ ಕ್ಯೂಬ್‌ಗಳನ್ನು ಹಟ್ಟಿಯಂಗಡಿ ಆಸುಪಾಸಿನ ಕನ್ನಡ ಮಾಧ್ಯಮ ಸಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಮಾತ್ರವಲ್ಲದೇ ಅವರಿಗೆ ಅದನ್ನು ಬಳಸುವ ಬಗ್ಗೆ ನಮ್ಮ ವಿದ್ಯಾರ್ಥಿಗಳು ತರಬೇತಿ ನೀಡುವರು ಎಂದು ಶರಣ್‌ಕುಮಾರ್ ನುಡಿದರು.
ರೂಬಿಕ್ ಕ್ಯೂಬ್‌ನಲ್ಲಿ ಹೊಸ ದಾಖಲೆ ಮೂಡಿಸುವ ವೇಳೆ ಅದರ ತೀರ್ಪುಗಾರರು ಉಪಸ್ಥಿತರಿರುವರು. ಅವರು ಪ್ರತಿ ಹಂತವನ್ನು ಪರಿಶೀಲಿಸಲಿದ್ದು, ಪ್ರಯತ್ನ ಯಶಸ್ವಿಯಾದರೆ ಗಿನ್ನೆಸ್ ಸಂಸ್ಥೆಯ ಪ್ರಮಾಣ ಪತ್ರವನ್ನು ನೀಡಿ ವಿಶ್ವ ದಾಖಲೆಯನ್ನು ಅಧಿಕೃತಗೊಳಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಸತಿ ಶಾಲೆಯ ವಿಶ್ವಸ್ಥ ಡಾ.ಎನ್.ಪಿ.ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.