17 ವರ್ಷದ ಹುಡುಗನಿಗೆ 55 ಬಾರಿ ಇರಿದು, ಕತ್ತು ಸೀಳಿ ಕೊಂದ 16ರ ಬಾಲಕ- ಭೀಕರ ಕೃತ್ಯದ ನಡುವೆ ಡ್ಯಾನ್ಸ್ ಮಾಡಿ ವಿಕೃತಿ!
ಈ ವಾರದ ಆರಂಭದಲ್ಲಿ ಪೂರ್ವ ದೆಹಲಿಯ ವೆಲ್‌ಕಮ್ ಕಾಲೋನಿಯಲ್ಲಿ 16 ವರ್ಷದ ಯುವಕನೊಬ್ಬ, ಮತ್ತೊಬ್ಬ 17 ವರ್ಷದ ಯುವಕನಿಗೆ 55ಕ್ಕೂ ಹೆಚ್ಚು ಬಾರಿ ಇರಿದು, ಆತನ ಕತ್ತು ಸೀಳಿ ಹತ್ಯೆ ಮಾಡಿ, ಬಳಿಕ ಶವವನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದಾನೆ ಎಂದು ನವದೆಹಲಿ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮಂಗಳವಾರ ಜಂತಾ ಮಜ್ದೂರ್ ಕಾಲೋನಿಯಲ್ಲಿ ನಡೆದ ಈ ಭೀಕರ ಹತ್ಯೆಯ ಕೆಲವು ಭಯಾನಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ಸುತ್ತಮುತ್ತಲಿನ ಜನರಿಗೂ ಬೆದರಿಕೆ ಹಾಕಿದ್ದಾನೆ.
ಬುಧವಾರ ಬೆಳಗ್ಗೆ ಆರೋಪಿಯನ್ನು ಬಂಧಿಸಲಾಗಿದ್ದು, ತಪ್ಪೊಪ್ಪಿಕೊಂಡಿದ್ದಾನೆ. ಬಿರಿಯಾನಿ ಖರೀದಿಸಲು ತನಗೆ ಹಣ ಕೇಳಿದ 17 ವರ್ಷದ ಯುವಕನನ್ನು ಹತ್ಯೆ ಮಾಡಿದ್ದಾನೆ. ಮೃತ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ನಾವು ಈಗಾಗಲೇ ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದೇವೆ. ಯುವಕ ಚಾಕುವನ್ನು ಎಲ್ಲಿಂದ ಖರೀದಿಸಿದ ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಪೊಲೀಸ್ ಉಪ ಆಯುಕ್ತ (ಈಶಾನ್ಯ) ಜಾಯ್ ಟಿರ್ಕಿ ಹೇಳಿದ್ದಾರೆ.
ಮಂಗಳವಾರ ರಾತ್ರಿ 11.15ರ ಸುಮಾರಿಗೆ ಈ ಕೃತ್ಯ ನಡೆದಿದೆ. ದಾಳಿಗೊಳಗಾದ ಯುವಕನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
“ಅವನು ಭೀಕರ ಕೃತ್ಯವನ್ನು ಮಾಡುವಾಗ ನೃತ್ಯ ಮಾಡುತ್ತಿದ್ದ. ಏನಾಗುತ್ತಿದೆ ಎಂದು ನೋಡಲು ಬಾಗಿಲು ತೆರೆಯಲು ಯತ್ನಿಸಿದ ಒಬ್ಬ ವ್ಯಕ್ತಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ” ಎಂದು ಅಪರಾಧದ ತನಿಖೆ ನಡೆಸುತ್ತಿರವವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.