ಕಾರ್ಕಳ: ಗೋಡಂಬಿ ಪೂರೈಸುವುದಾಗಿ ನಂಬಿಸಿ 66 ಲಕ್ಷ ರೂ. ವಂಚನೆ- ಪ್ರಕರಣ ದಾಖಲು
ಅಜೆಕಾರು, ನ.23: ವಿದೇಶದಿಂದ ಗೋಡಂಬಿ ಪೂರೈಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಡಂಬಿ ಬೆಳಗಾರರು/ಉದ್ಯಮಿಗಳು/ರಪ್ತುದಾರರ ಸಂಘ ಎಂಬ ವ್ಯಾಪಾರ ಸಂಸ್ಥೆಯ ವತಿಯಿಂದ 2022ರ ಜುಲೈ ತಿಂಗಳಿನಲ್ಲಿ ಮಂಗಳೂರಿನ ಟಿಎಂಎ ಪೈ ಕನ್ವೆನಷನ್ ಸೆಂಟರ್ನಲ್ಲಿ ನಡೆದ ಗೋಡಂಬಿ ಖರೀದಿದಾರರು ಮತ್ತು ಮಾರಾಟಗಾರರ ಸಮಾವೇಶದಲ್ಲಿ ಗೋಡಂಬಿ ಉದ್ಯಮದಲ್ಲಿ ದಲ್ಲಾಳಿ ಕೆಲಸ ಮಾಡಿಕೊಂಡಿದ್ದ ಆರೋಪಿ ಸದಾಫ್ ಖುರೇಶಿ, ಕಡ್ತಲ ತಿರುಮಲ ಗೋಡಂಬಿ ಇಂಡಸ್ಟ್ರೀಸ್ನ ಪಾಲುದಾರ ಯೋಗೀಶ್ ಅವರಿಗೆ ಶೇಖರ್ ಬದಿರೆಡ್ಡಿ ಮತ್ತು ಪಾಲ ಮಣಿಕಂಠ ಎಂಬವರನ್ನು ಭೇಟಿ ಮಾಡಿಸಿದ್ದನು.
ಈ ಮೂವರು ಆರೋಪಿಗಳು ಐವರಿ ಕೋಸ್ಟ್ ಮತ್ತು ನೈಜಿರೀಯಾ ದೇಶದಿಂದ ಕಚ್ಚಾ ಗೋಡಂಬಿಯನ್ನು ಸರಬರಾಜು ಮಾಡುವುದಾಗಿ ಯೋಗೀಶ್ ಅವರನ್ನು ನಂಬಿಸಿ ಖರೀದಿ ಒಪ್ಪಂದಕ್ಕೆ ಸಹಿ ಹಾಕಲು ಪ್ರೇರೆಪಿಸಿ, 65,94,360 ರೂ. ಮೊತ್ತವನ್ನು ಪಡೆದಿದ್ದಾರೆ. ಆದರೆ ಇವರು ಒಪ್ಪಂದದ ಕರಾರಿನಂತೆ ಕಚ್ಚಾ ಗೋಡಂಬಿ ಗಳನ್ನು ಪೂರೈಸದೇ ಮೋಸ ಮಾಡಿರುವುದಾಗಿ ದೂರಲಾಗಿದೆ.