ಸ್ನ್ಯಾಪ್ ಚಾಟ್ ಆ್ಯಪ್ ಮೂಲಕ ನೇಜಾರಿನ ಮನೆ ತಲುಪಿದ್ದ ಹಂತಕ ಪ್ರವೀಣ್ ಚೌಗುಲೆ!

ಉಡುಪಿ, ನ.22: ನೇಜಾರಿನಲ್ಲಿ ತಾಯಿ ಹಾಗೂ ಮೂರು ಮಕ್ಕಳ ಬರ್ಬರ ಹತ್ಯೆಗೈದ ಹಂತಕ ಪ್ರವೀಣ್ ಚೌಗುಲೆಯ ವಿಚಾರಣೆ ಬಹುತೇಕ ಮುಗಿದಿದ್ದು‌ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ‌ ಇದೆ.

ಹಂತಕ ಪ್ರವೀಣ್ ತಾನು ಮಾಡಿದ ಕೊಲೆಯ ಯಾವುದೇ ಸುಳಿವು ಸಿಗದಂತೆ ಕೇವಲ ಎರಡು ದಿನದಲ್ಲಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದ. ಪ್ರವೀಣ್ ಚೌಗುಲೆ ಐನಾಝಳ ಮನೆಯ ದಾರಿಯನ್ನು ‘ಸ್ನ್ಯಾಪ್ ಚಾಟ್’ನಲ್ಲಿ ಲೋಕೇಶನ್ ಹಾಕುವ ಮೂಲಕ ನೇಜಾರಿನ ಮನೆ ತಲುಪಿದ್ದ ಎನ್ನುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಏನಿದು ಸ್ನ್ಯಾಪ್ ಚಾಟ್..? ಇದು ಮಲ್ಟಿಮೀಡಿಯಾ ಇನ್‌ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಶನ್. ಇದರಲ್ಲಿ ತಮ್ಮ ಗೆಳೆಯರಿಗೆ ಫೋಟೋ ಸಂದೇಶವನ್ನು ಅಲ್ಪ ಸಮಯಕ್ಕೆ ಕಳುಹಿಸಬಹುದು. ಇಬ್ಬರಲ್ಲೂ ಈ ಅಪ್ಲಿಕೇಶನ್ ಇದ್ದರೆ ರಿಕ್ವೆಸ್ಟ್ ಕಳುಹಿಸಿ ಫ್ರೆಂಡ್ಸ್ ಮಾಡಿಕೊಳ್ಳಬಹುದು. ಇದರಲ್ಲಿರುವ ಲೋಕೇಶನ್ ಗೆ ಹೋದರೆ ತಮ್ಮ ಗೆಳೆಯರು ಯಾವ ಸ್ಥಳದಲ್ಲಿದ್ದಾರೆ ಎಂದು ಕೂಡ ನೋಡಬಹುದು. ತನ್ನ ಲೊಕೇಶನ್ ಗೆಳೆಯರಿಗೆ ತೋರದಂತೆ ಹೈಡ್ ಕೂಡ ಮಾಡಲೂಬಹುದು.

ನ.12 ರಂದೇ ಐನಾಝ್ ನೇಜಾರಿನ ಮನೆಗೆ ಬಂದಿದ್ದ ಎನ್ನುವುದು ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ. ಕೃತ್ಯಕ್ಕೆ ಒಂದು ವಾರ ಮೊದಲು ಐನಾಝ್ ಮನೆಯಲ್ಲಿ ನಡೆದ ಹುಟ್ಟುಹಬ್ಬ ಆಚರಣೆಯಲ್ಲಿ ಆತ ಆಕೆಗೆ ಉಂಗುರ ತೊಡಿಸಿದ್ದ ಎಂಬುದೆಲ್ಲ ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. ಪ್ರವೀಣ್ ಇದೇ ಮೊದಲ ಬಾರಿಗೆ ನೇಜಾರಿಗೆ ಬಂದು ಈ ಕೃತ್ಯ ಎಸಗಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಏರ್ ಇಂಡಿಯಾ ಏಕ್ಸ್‌ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದ ಐನಾಝಳನ್ನು ಹಚ್ಚಿಕೊಂಡಿದ್ದ ಅದೇ ಕಂಪೆನಿಯ ಸಿಬ್ಬಂದಿ ಪ್ರವೀಣ್ ಆಕೆಗೆ ವಿವಿಧ ರೀತಿಯ ಕಿರುಕುಳ ನೀಡುತ್ತಿದ್ದನು. ಪದೇಪದೇ ಕರೆ ಮಾಡಿ ಮಾತನಾಡಲು ಒತ್ತಾಯಿಸುತ್ತಿದ್ದ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಆಕೆ ಆತನ ಮೊಬೈಲ್ ನಂಬರನ್ನು ಬ್ಲಾಕ್ ಮಾಡಿದ್ದಳು.

ಕೊಲೆಗೆ ಮುನ್ನಾ ದಿನ ನ.11ರಂದು ಶನಿವಾರ ಐನಾಝ್ ಅಬುಧಾಬಿಯಿಂದ ಕರ್ತವ್ಯ ಮುಗಿಸಿ ಮಂಗಳೂರಿಗೆ ಬಂದಿದ್ದು, ಆಕೆ ಅಬುಧಾಬಿಯಿಂದ ಬರುವಾಗ ತಮ್ಮನಿಗೆ ಮತ್ತು ಮನೆ ಕೆಲಸದಾಕೆಯ ಮಗನಿಗೆ ತಂದ ವಸ್ತುಗಳನ್ನು ಕೊಡಲು ಶನಿವಾರ ಸಂಜೆ ನೇಜಾರಿನ ಮನೆಗೆ ಬಂದಿದ್ದಳು. ಆಕೆಗೆ ಮರುದಿನ ರವಿವಾರ ರಾತ್ರಿ 8ಗಂಟೆಗೆ ದುಬೈ ಹೋಗಲು ಇದ್ದುದರಿಂದ ಮನೆಯಿಂದ ಬೆಳಗ್ಗೆ 11ಗಂಟೆಗೆ ಮಂಗಳೂರಿಗೆ ಹೊರಡಬೇಕಿತ್ತು. ಇದೆನ್ನೆಲ್ಲ ಅರಿತಿದ್ದ ಪ್ರವೀಣ್ ರವಿವಾರ ಬೆಳಗ್ಗೆ ಆಕೆ ಹೊರಡುವ ಮೊದಲು ಆಕೆಯನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದನು ಎಂದು ತಿಳಿದುಬಂದಿದೆ.

ರಿಕ್ಷಾ ಚಾಲಕನಿಗೆ ತೃಪ್ತಿ ಲೇಔಟ್ ಬೋರ್ಡ್ ನೋಡುತ್ತಿದ್ದಂತೆ ನಿಲ್ಲಿಸಲು ಹೇಳಿದ್ದ: ಮೊದಲ ಬಾರಿಗೆ ನೇಜಾರಿಗೆ ಬರುತ್ತಿದ್ದ ಆರೋಪಿ ಪ್ರವೀಣ್‌, ಆಕೆಯ ಮನೆ ಗೊತ್ತಿಲ್ಲದಿದ್ದರೂ ಸ್ವಾಪ್ ಚಾಟ್ ಆ್ಯಪ್ ಮೂಲಕ ದಾರಿ ಕಂಡುಕೊಂಡಿದ್ದನು. ಆ್ಯಪ್ ಸೂಚಿಸಿದ ಮಾರ್ಗದಲ್ಲೇ ಬಂದು ಆತ, ಐನಾಝ್ ಮನೆ ತಲುಪಿದ್ದಾನೆ.

ಸಂತೆಕಟ್ಟೆಯಿಂದ ನೇಜಾರಿನ ತೃಪ್ತಿ ಲೇಔಟ್‌ಗೆ ಪ್ರವೀಣ್ ರಿಕ್ಷಾದಲ್ಲಿ ಹೋಗಿದ್ದು, ಈ ವೇಳೆ ಚಾಲಕ ದಾರಿ ತಪ್ಪಿ ಮುಂದೆ ಹೋಗಿದ್ದನು. ಆಗ ಪ್ರವೀಣ್‌, ಸ್ಟಾಪ್‌ಚಾಟ್ ನೋಡಿಯೇ ಆಕೆಯ ಮನೆ ದಾರಿಯನ್ನು ರಿಕ್ಷಾ ಚಾಲಕನಿಗೆ ತೋರಿಸಿದ್ದನು.

ಒಂದು ವೇಳೆ ಆತ ಈ ಹಿಂದೆ ಮನೆಗೆ ಬಂದಿದ್ದರೆ ಅಥವಾ ಮನೆಯ ದಾರಿ ಗೊತ್ತಿದ್ದರೆ ರಿಕ್ಷಾ ಚಾಲಕನನ್ನು ದಾರಿ ತಪ್ಪಿ ಮುಂದೆ ಹೋಗಲು ಅವಕಾಶ ನೀಡುತ್ತಿರಲಿಲ್ಲ. ಆಕೆ ಮನೆಯಲ್ಲೇ ಇದ್ದುದರಿಂದ ಸ್ಟಾಪ್‌ಚಾಟ್ ಸರಿಯಾಗಿಯೇ ಆಕೆಯ ಮನೆ ಇರುವ ಸ್ಥಳವನ್ನು ತೋರಿಸಿದೆ ಮತ್ತು ಮನೆ ಎದುರೇ ರಿಕ್ಷಾ ಚಾಲಕ ಪ್ರವೀಣ್‌ ನನ್ನು ಬಿಟ್ಟು ವಾಪಸ್ ಹೋಗಿದ್ದಾರೆ.

ಕೃತ್ಯಕ್ಕೆ ಬಂದಾಗ ಧರಿಸಿದ್ದ ಸುಟ್ಟ ಬಟ್ಟೆ ಪತ್ತೆ
ನೇಜಾರಿನಲ್ಲಿ ಕೊಲೆ ನಡೆಸಿದ ಬಳಿಕ ಅನ್ಯರ ಬೈಕ್‌ ಸಹಾಯದಿಂದ ಸಂತೆಕಟ್ಟೆ, ಕರಾವಳಿ ಬೈಪಾಸ್‌ ಮಾರ್ಗವಾಗಿ ಹೆಜಮಾಡಿ ಟೋಲ್‌ಗೇಟ್‌ ತಲುಪಿದ್ದ. ಅಲ್ಲಿ ಆತ ಮೊದಲೇ ತಂದು ನಿಲ್ಲಿಸಿದ್ದ ಎಂಜಿ ಹೆಕ್ಟರ್‌ ಕಾರಿನ ಮೂಲಕ ಬಪ್ಪನಾಡು ಬಳಿಯ ಪಾಳುಬಿದ್ದ ಕಟ್ಟಡದಲ್ಲಿ ಆತ ರಕ್ತಸಿಕ್ತ ಬಟ್ಟೆಯನ್ನು ಸುಟ್ಟು ಹಾಕಿದ್ದಾನೆ. ಪೊಲೀಸರ ಮಹಜರು ಪ್ರಕ್ರಿಯೆ ವೇಳೆ ಆತ ಇದನ್ನು ತಿಳಿಸಿದ್ದು, ಬಟ್ಟೆಯ ಕುರುಹುಗಳು ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ. ಬಳಿಕ ಆತ ಅಲ್ಲಿಂದ ನೇರವಾಗಿ ಮಂಗಳೂರಿನತ್ತ ತೆರಳಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.

ಐಯ್ನಾಝ್ ಪ್ಲಾಟ್‌ನ ಬಳಿ ಹಂತಕನ ಸ್ಕೂಟರ್ ಪತ್ತೆ… ಬಿಜೈನಲ್ಲಿರುವ ಮೃತ ಯುವತಿ ಐಯ್ನಾಝ್ ಬಾಡಿಗೆ ರೂಂ ಬಳಿ ಪಾರ್ಕ್‌ ಮಾಡಿದ್ದ ಚೌಗಲೆ ಹೆಸರಿನಲ್ಲಿರುವ ಸ್ಕೂಟರ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರವೀಣ್‌ ಚೌಗಲೆ ಕಾರು ಖರೀದಿ ಮಾಡಿದ ಬಳಿಕ ತನ್ನಲ್ಲಿದ್ದ ಸ್ಕೂಟರ್‌ ಅನ್ನು ಸಹೋದ್ಯೋಗಿ ಐಯ್ನಾಝ್ ಬಳಕೆ ಮಾಡಲು ನೀಡಿದ್ದ. ಆರೋಪಿ ಆಕೆಗೆ ಸ್ಕೂಟರ್‌ ಅನ್ನು ಮಾರಾಟ ಮಾಡಿದ್ದನೇ ಅಥವಾ ಉಪಯೋಗಿಸಲು ನೀಡದ್ದನೇ ಎಂಬುದನ್ನು ಪೊಲೀಸರು ಇನ್ನಷ್ಟೇ ವಿಚಾರಣೆ ನಡೆಸಬೇಕಿದೆ.

ಹಂತಕ ಚೌಗುಲೆಗೆ ಕುಸ್ತಿ ಕರಗತವಾಗಿತ್ತು
ದೈಹಿಕವಾಗಿಯೂ ಸದೃಢನಾಗಿದ್ದ ಆರೋಪಿ ಪ್ರವೀಣ್‌ ಕುಸ್ತಿಪಟುವಾಗಿದ್ದ. ಎದುರಾಳಿಯನ್ನು ಕೆಡವಿ ಹಾಕುವುದು ಆತ ತಿಳಿದುಕೊಂಡಿದ್ದ. ಹೀಗಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಚಾಕುವಿನಿಂದ 4 ಮಂದಿಯನ್ನು ಒಬ್ಬನೇ ಕೊಲ್ಲಲು ಸಾಧ್ಯವಾಗಿತ್ತು. ಕೊಲೆ ನಡೆಸಿದ ದಿನ ಮಾದಕದ್ರವ್ಯ ಏನಾದರೂ ಸೇವಿಸಿದ್ದನೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲು ಫಾರೆನ್ಸಿಕ್‌ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲಾಗಿದ್ದು, ವರದಿ ಇನ್ನಷ್ಟೇ ಪೊಲೀಸರ ಕೈಸೇರಬೇಕಿದೆ.

Leave a Reply

Your email address will not be published. Required fields are marked *

error: Content is protected !!