ಕೊಂಕಣ ರೈಲು ಮಾರ್ಗದ ಹಳಿ ನಿರ್ವಹಣೆ: ಸಂಚಾರದಲ್ಲಿ ವ್ಯತ್ಯಯ
ಉಡುಪಿ, ನ.21: ಕೊಂಕಣ ರೈಲು ಮಾರ್ಗದ ಕುಮಟಾ ಮತ್ತು ಭಟ್ಕಳ ನಿಲ್ದಾಣಗಳ ನಡುವೆ ಹಳಿಯ ನಿರ್ವಹಣಾ ಕಾರ್ಯವು ನ.23ರಂದು ಅಪರಾಹ್ನ 12 ರಿಂದ 3 ಗಂಟೆಯವರೆಗೆ ನಡೆಯಲಿರುವುದರಿಂದ ಈ ವೇಳೆ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ನ.23ರಂದು ಬೆಂಗಳೂರು ಮತ್ತು ಮುರ್ಡೇಶ್ವರ ನಡುವೆ ಸಂಚರಿಸುವ ಎಕ್ಸ್ಪ್ರೆಸ್ (ರೈಲು ನಂ.16585) ರೈಲು ತನ್ನ ಸಂಚಾರವನ್ನು ಭಟ್ಕಳ ನಿಲ್ದಾಣದಲ್ಲೇ ಮುಕ್ತಾಯ ಗೊಳಿಸಲಿದೆ. ಹೀಗಾಗಿ ಅಂದು ಭಟ್ಕಳ ಮತ್ತು ಮುರ್ಡೇಶ್ವರ ನಡುವೆ ಅದರ ಸಂಚಾರ ರದ್ದುಗೊಳ್ಳಲಿದೆ.
ಅದೇ ರೀತಿ ಮುರ್ಡೇಶ್ವರ- ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲಿನ ಅಂದಿನ ಪ್ರಯಾಣ ಭಟ್ಕಳ ನಿಲ್ದಾಣದಿಂದ ಎಂದಿನ ಸಮಯಕ್ಕೆ ಸರಿಯಾಗಿ ಪ್ರಾರಂಭಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅದೇ ರೀತಿ ಕೊಚ್ಚುವೇಲು-ಮುಂಬೈ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲು ನ.23ರಂದು ಭಟ್ಕಳ ನಿಲ್ದಾಣದಿಂದ 20 ನಿಮಿಷ ತಡವಾಗಿ ಹೊರಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.