ಉಡುಪಿ ಡಿಸಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ!
ಉಡುಪಿ, ನ.21: ಸಾಮಾಜಿಕ ಜಾಲತಾಣದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಠಿಸಿ ಹಣಕ್ಕಾಗಿ ಸಂದೇಶ ಕಳುಹಿಸುತ್ತಿರುವ ಬಗ್ಗೆ ವರದಿಯಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಉಡುಪಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾಧಿಕಾರಿ ಹೆಸರನ್ನು ಬಳಸಿಕೊಂಡು ನಕಲಿ ಖಾತೆಯನ್ನು ಸೃಷ್ಠಿಸಿ ಶಿವಮೊಗ್ಗ ಹಾಗೂ ಉಡುಪಿಯ ತಹಶೀಲ್ದಾರ್ಗಳಿಗೆ ಹಣ ಕಳುಹಿಸುವಂತೆ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ದೂರು ನೀಡಿದ್ದು, ಅದರಂತೆ ತನಿಖೆ ನಡೆಸಿರುವ ಪೊಲೀಸರು ನಕಲಿ ಖಾತೆಯನ್ನು ಪಶ್ಚಿಮ ಬಂಗಾಳದ ವ್ಯಕ್ತಿ ಸೃಷ್ಠಿಸಿರುವುದಾಗಿ ಗುರುತಿಸಿದ್ದಾರೆ ಎಂದು ತಿಳಿದುಬಂದಿದೆ.
‘ದುಷ್ಕರ್ಮಿಗಳು ತನ್ನ ಹೆಸರನ್ನು ಬಳಸಿದ್ದು, ಆದರೆ ಅದರಲ್ಲಿ ಇರುವ ಮೊಬೈಲ್ ಸಂಖ್ಯೆ ನನ್ನದಲ್ಲ. ಅದೇ ರೀತಿ ನನ್ನ ಖಾತೆಗೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಫೋಟೋವನ್ನು ಬಳಸಿಕೊಳ್ಳಲಾಗಿದೆ. ದುಷ್ಕರ್ಮಿಗಳು ಹಣ ಕಳುಹಿಸುವಂತೆ ಕೆಲವು ತಹಶೀಲ್ದಾರ್ಗಳಿಗೆ ಸಂದೇಶ ಕಳುಹಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ತಿಳಿಸಿದ್ದಾರೆ.