ಹೆರಿಗೆ ವೇಳೆ ಮಗು ಮೃತ್ಯು- ಕುಂದಾಪುರ ಸರಕಾರಿ ಆಸ್ಪತ್ರೆ ವಿರುದ್ಧ ಪ್ರತಿಭಟನೆ

ಕುಂದಾಪುರ: ಗಂಗೊಳ್ಳಿ ಮೂಲದ ಮಹಿಳೆಯೊಬ್ಬರ ಹೆರಿಗೆ ವೇಳೆ ಮಗು ಮೃತಪಟ್ಟ ಘಟನೆ ನಡೆದಿದ್ದು ಸೋಮವಾರ ಸಂಜೆ ವೇಳೆ ಇಲ್ಲಿನ ಸರಕಾರಿ ಆಸ್ಪತ್ರೆ ಎದುರು ಜಮಾಯಿಸಿದ ಸಾರ್ವಜನಿಕರು ಆಸ್ಪತ್ರೆಯ ಹೆರಿಗೆ ತಜ್ಞ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ‌ ತಡರಾತ್ರಿವರೆಗೂ ಪ್ರತಿಭಟನೆ ನಡೆಯಿತು.

ನ.17ರಂದು ರಾತ್ರಿ 10.30 ರ ವೇಳೆಗೆ ಗಂಗೊಳ್ಳಿಯ ಗುಡ್ಡದಕೇರಿಯ ದಾವನಮನೆ ಶ್ರೀನಿವಾಸ ಖಾರ್ವಿ ಅವರ ಪತ್ನಿ ಹೆರಿಗೆ ನೋವಿನಿಂದ ದಾಖಲಾಗಿದ್ದರು. ಸೋಮವಾರ ಬೆಳಗ್ಗೆ ಹೆರಿಗೆ ಮಾಡಿಸಿದ ವೈದ್ಯರು ಮಗು ಮೃತಪಟ್ಟಿದೆ ಎಂದು ಹೇಳಿದ್ದಾರೆ. ಇದು ವೈದ್ಯರ ನಿರ್ಲಕ್ಷ್ಯದಿಂದ ಆದ ಸಾವು ಎಂದು ಊರವರು ಹಾಗೂ ಮನೆಯವರು ಪ್ರತಿಭಟನೆಗೆ ಕುಳಿತಿದ್ದಾರೆ. ಘಟನೆಗೆ ಸಂಬಂಧಪಟ್ಟ ವೈದ್ಯರ ಅಮಾನತು ಮಾಡಿ, ಪ್ರಕರಣದ ಸಮಗ್ರ ತನಿಖೆ ನಡೆಸಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸಬೇಕು. ಸ್ಥಳಕ್ಕೆ ಡಿಸಿ, ಜಿಲ್ಲಾ ಆರೋಗ್ಯಾಧಿಕಾರಿ ಬರಬೇಕು ಎಂದು ಸೋಮವಾರ ಸಂಜೆ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ಮೂಲಕ ಒತ್ತಾಯಿಸಿದರು.

ಮಗುವಿನ ಕುತ್ತಿಗೆಗೆ ಹೊಕ್ಕುಳಬಳ್ಳಿ ಸುತ್ತಿಕೊಂಡು ಸಾವಾಗಿದೆ ಎಂದು ವೈದ್ಯರು ತಿಳಿಸಿದ್ದು ಉಡಾಫೆಯಿಂದ ಮಾತಾಡಿದ್ದಾಗಿ ಕುಟುಂಬಿಕರು ಆರೋಪಿಸುತ್ತಾರೆ. ರಕ್ತಸ್ರಾವ ಇದೆ, ಹೊಟ್ಟೆ ನೋವು ಇದೆ ಎಂದರೂ ವೈದ್ಯರು ಕ್ಯಾರೇ ಮಾಡಿಲ್ಲ. ಎಂಟೂವರೆ ತಿಂಗಳಿನ ವೇಳೆ ಸ್ಕಾನಿಂಗ್ ಮಾಡದ ಕಾರಣ ಈಗ ಸ್ಕ್ಯಾನಿಂಗ್ ಮಾಡಿ ಎಂದು ಮನೆಯವರು ಒತ್ತಾಯಿಸಿದರೂ ವೈದ್ಯರು ಸ್ಕಾನಿಂಗ್ ಮಾಡಿಸಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಉಪವಿಭಾಗ ಆಸ್ಪತ್ರೆಯ ಆಡಳಿತ ಶಸ್ತ್ರ ಚಿಕಿತ್ಸಕ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ಸ್ಥಳಕ್ಕೆ ತೆರಳಿ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರೂ ಪ್ರತಿಭಟನಕಾರರು ಸ್ಥಳ ಬಿಟ್ಟು ಕದಲಲಿಲ್ಲ. ರಾತ್ರಿ 9 ರ ತನಕವೂ ಪ್ರತಿಭಟನೆ ಮುಂದುವರೆದಿದ್ದು ಡಿ.ಎಚ್.ಒ ಹಾಗೂ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸ್ಥಳದಲ್ಲಿದ್ದಾರೆ.

ಕುಂದಾಪುರ ನಗರ ಠಾಣೆ ಇನ್ಸ್‌ಪೆಕ್ಟರ್ ನಂದ ಕುಮಾರ್, ಪಿಎಸ್‌ಐ ಪ್ರಸಾದ್, ಸಂಚಾರ ಠಾಣೆ ಪಿಎಸ್‌ಐ ಸುಬ್ಬಣ್ಣ ನೇತೃತ್ವದಲ್ಲಿ ಬಂದೋ ಬಸ್ತ್ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!