ಕೊರಗ ಸಮುದಾಯದವರ ಸಂಸ್ಕೃತಿ, ಪರಿಸರ ಕಾಳಜಿ ಶ್ಲಾಘನೀಯ- ನ್ಯಾ.ಎ.ಅರುಣಾ
ಕುಂದಾಪುರ: ಕೊರಗ ಸಮುದಾಯ ಉಳಿಸಿರುವ ಸಂಸ್ಕೃತಿ, ಪರಂಪರೆ ಹಾಗೂ ಪರಿಸರದ ಮೇಲಿನ ಕಾಳಜಿ ನಿಜಕ್ಕೂ ಶ್ಲಾಘನೀಯ. ಅದರೊಂದಿಗೆ ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಶಿಕ್ಷಣ ಹಾಗೂ ಕಾನೂನಿನ ಅರಿವು ಕೂಡ ಪ್ರಾಮುಖ್ಯ ಎಂದು ಚಿಕ್ಕಬಳ್ಳಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎ. ಅರುಣಾ ಸೋಮನಾಥ ಹೆಗ್ಡೆ ಹೇಳಿದರು.
ಕೊರಗ ಸಂಘಟನೆಗಳ ಸಂಘಟನೆಯ ಸಹಯೋಗದಲ್ಲಿ ಕುಂದಾಪುರ ತಾಲೂಕಿನ ಕುಂಭಾಶಿಯಲ್ಲಿರುವ ಮಕ್ಕಳ ಮನೆಯಲ್ಲಿ ಆಯೋಜಿಸಿದ ‘ಬೊಲ್ಪು-2023’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾದ ಡಾ. ನಾಗೇಶ್ ಮಾತನಾಡಿ, ಕೊರಗ ಸಮುದಾಯದವರು ಕಾಳಜಿಯುಳ್ಳವರು, ಪ್ರಾಮಾಣಿಕರು. ಈ ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಮತ್ತಷ್ಟು ಮುಖ್ಯವಾಹಿನಿಗೆ ಬರಬೇಕೆಂದರು.
ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಮಾತನಾಡಿ, ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ದೀಪಾವಳಿ ಹಬ್ಬವು ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗುವ ಹಾದಿ ದ್ಯೋತಕ. ಮಕ್ಕಳ ಮನೆಯಲ್ಲಿ ನಡೆಯುವ ಎಲ್ಲಾ ಕಾರ್ಯಚಟುವಟಿಕೆ ಅರ್ಥ ಪೂರ್ಣವಾಗಿದ್ದು ಕೊರಗ ಸಮುದಾಯದವರು ಅತ್ಯಂತ ಮುಗ್ಧ ಹಾಗೂ ನಂಬಿಕಸ್ಥರು. ಶಿಕ್ಷಣದಲ್ಲಿ ಪ್ರಗತಿ ಸಾಧಿಸುವ ಮೂಲಕ ವಿವಿಧ ಕ್ಷೇತ್ರದಲ್ಲಿಯೂ ಈ ಸಮುದಾಯ ಸಾಧನೆ ಮಾಡಲಿ ಎಂದರು.
ಕಾರ್ಯಕ್ರಮದಲ್ಲಿ ಕೊರಗ ಮುಖಂಡರಾದ ಶೇಖರ್ ಮರವಂತೆ, ಲಕ್ಷ್ಮಣ್ ಬೈಂದೂರು, ಗಣೇಶ್ ಬಾರ್ಕೂರು ಉಪಸ್ಥಿತರಿದ್ದರು.ಅಶ್ವಿನಿ ಕಾರ್ಯಕ್ರಮ ನಿರೂಪಿಸಿ, ಗಣೇಶ್ ಕುಂದಾಪುರ ಸ್ವಾಗತಿಸಿ, ವಿನಿತಾ ವಂದಿಸಿದರು.