ಉಡುಪಿ: ನ.22ರಿಂದ ರಾಜ್ಯಮಟ್ಟದ ರಂಗಭೂಮಿ ಕನ್ನಡ ನಾಟಕ ಸ್ಪರ್ಧೆ
ಉಡುಪಿ, ನ.20: ಉಡುಪಿಯ ರಂಗಭೂಮಿಯ ವತಿಯಿಂದ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ 44ನೇ ಆವೃತ್ತಿ ಇದೇ ನ.22ರಿಂದ ಡಿ.3ರವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದರ ಮಂಟಪದಲ್ಲಿ ನಡೆಯಲಿದೆ ಎಂದು ರಂಗಭೂಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಒಟ್ಟು 54 ಅರ್ಜಿಗಳು ಬಂದಿದ್ದು, ಇವುಗಳಲ್ಲಿ ಅಂತಿಮವಾಗಿ 12 ನಾಟಕಗಳನ್ನು ಆಯ್ಕೆ ಮಾಡಲಾಗಿದೆ ಎಂದರು. ಬೆಂಗಳೂರಿನಿಂದ ಐದು ತಂಡಗಳಿದ್ದರೆ, ಮೈಸೂರು, ಮಂಡ್ಯ, ಬೆಳಗಾವಿ, ಉಡುಪಿ, ಬಳ್ಳಾರಿ, ಧಾರವಾಡ, ವಿಜಯನಗರಗಳಿಂದ ಒಂದು ತಂಡಗಳು ತಮ್ಮ ನಾಟಕಗಳನ್ನು ಪ್ರದರ್ಶಿಸಲಿವೆ ಎಂದರು.
ಪ್ರದರ್ಶನಗೊಳ್ಳುವ 12 ನಾಟಕಗಳಲ್ಲಿ ಆರು ಸಾಮಾಜಿಕ ನಾಟಕಗಳಾಗಿದ್ದರೆ, ಮೂರು ಪೌರಾಣಿಕ, ಎರಡು ಜಾನಪದ ಹಾಗೂ ಒಂದು ಐತಿಹಾಸಿಕ ನಾಟಕಗಳಿವೆ. 44ನೇ ರಂಗಭೂಮಿ ಕನ್ನಡ ನಾಟಕ ಸ್ಪರ್ಧೆಯನ್ನು ನ.22ರ ಬುಧವಾರ ಸಂಜೆ 6ಕ್ಕೆ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಉದ್ಘಾಟಿಸಲಿದ್ದು, ರಂಗಭೂಮಿ ಗೌರವಾಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಉದ್ಯಮಿ ಸತ್ಯಾನಂದ ನಾಯಕ್ ಮತ್ತು ಬೈಕಾಡಿ ಸುಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು.
ಡಾ.ಟಿಎಂಎ ಪೈ, ಎಸ್.ಎಲ್.ನಾರಾಯಮ ಭಟ್ ಹಾಗೂ ಮಲ್ಪೆ ಮಧ್ವರಾಜ್ ಸ್ಮಾರಕ ನಡೆಯುವ ಈ ನಾಟಕ ಸ್ಪರ್ಧೆ ಯಲ್ಲಿ ಪ್ರತಿದಿನದ ನಾಟಕ ಸಂಜೆ 6:30ಕ್ಕೆ ಸರಿಯಾಗಿ ಪ್ರಾರಂಭಗೊಳ್ಳಲಿದೆ. ನಾಟಕ ವಿಳಂಬವಾಗಿ ಪ್ರಾರಂಭಗೊಂಡರೆ ಅದನ್ನು ಅನರ್ಹಗೊಳಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ತಿಳಿಸಿದರು.
ಈ ಬಾರಿ ಪ್ರಥಮ ಬಹುಮಾನ ಪಡೆಯುವ ನಾಟಕಕ್ಕೆ 35,000ರೂ, ದ್ವಿತೀಯ ಸ್ಥಾನಿಗೆ 25,000ರೂ. ಹಾಗೂ ತೃತೀಯ ಬಹುಮಾನ ವಿಜೇತ ನಾಟಕಕ್ಕೆ 15,000ರೂ. ನಗದು ಬಹುಮಾನ ನೀಡಲಾಗುತ್ತದೆ. ಇದರೊಂದಿಗೆ ಶ್ರೇಷ್ಠ ನಿರ್ದೇಶಕ, ನಟ,ನಟಿ, ಪ್ರಸಾದನ, ರಂಗಪರಿಕರ, ಸಂಗೀತ, ಬೆಳಕು, ಹಾಸ್ಯನಟ, ಬಾಲನಟ, ಶಿಸ್ತಿನ ತಂಡ ಈ ಎಲ್ಲಾ ವಿಭಾಗಗಳಲ್ಲೂ ನಗದು ಸಹಿತ ಪ್ರಶಸ್ತಿ ಗಳನ್ನು ನೀಡಲಾಗುತ್ತದೆ ಎಂದವರು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿಯ ಉಪಾಧ್ಯಕ್ಷ ಭಾಸ್ಕರ್‌ರಾವ್ ಕಿದಿಯೂರು, ಎಸ್.ರಾಜಗೋಪಾಲ ಬಲ್ಲಾಳ್, ಜೊತೆ ಕಾರ್ಯದರ್ಶಿ ಶ್ರೀಪಾದ್ ಹೆಗಡೆ, ವಿವೇಕಾನಂ ಎನ್. ಉಪಸ್ಥಿತರಿದ್ದರು.