‘ಕಾಂತಾರ’ ಪ್ರೀಕ್ವೆಲ್ ಅಧಿಕೃತ ಲಾಂಚ್‌ಗೆ ವೇದಿಕೆ ಸಿದ್ಧ: ನ.27ರಂದು ಅದ್ಧೂರಿ ಮುಹೂರ್ತ

ಈ ವರ್ಷ ಚಿತ್ರರಂಗದಲ್ಲಿ ದೂಳೆಬ್ಬಿಸಿದ ಸಿನಿಮಾ ಬ್ಲಾಕ್‌ಬಸ್ಟರ್ ಸಿನಿಮಾ ‘ಕಾಂತಾರ’ವನ್ನು ನೀಡಿದ ನಟ- ನಿರ್ದೇಶಕ ರಿಷಬ್ ಶೆಟ್ಟಿ, ಬಹುಭಾಷಾ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿರುವ ಪ್ರಿಕ್ವೆಲ್‌ ಅನ್ನು ತಯಾರಿಸುವುದಾಗಿ ಬಹಿರಂಗಪಡಿಸಿದ್ದರು. ಅದಾದ 10 ತಿಂಗಳ ನಂತರ, ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಿರ್ಮಿಸಿದ ಬಹು ನಿರೀಕ್ಷಿತ ಚಿತ್ರವು ನ.27 ರಂದು ಅದ್ಧೂರಿ ಮುಹೂರ್ತದೊಂದಿಗೆ ಅಧಿಕೃತವಾಗಿ ಲಾಂಚ್ ಆಗಲಿದೆ.

ಈ ಹಿಂದಿನ ಮಾತುಕತೆಯಲ್ಲಿ ರಿಷಬ್, ಕಾಂತಾರ ಚಿತ್ರದ ಚಿತ್ರೀಕರಣದ ವೇಳೆ ತನ್ನ ಮನಸ್ಸಿನಲ್ಲಿ ಪ್ರಿಕ್ವೆಲ್ ಕಲ್ಪನೆಯು ಹೊಳೆಯಿತು ಮತ್ತು ಅದನ್ನು ಪರಿಷ್ಕರಿಸಲು ಸಮಯ ತೆಗೆದುಕೊಂಡಿದ್ದಾಗಿ ಉಲ್ಲೇಖಿಸಿದ್ದಾರೆ. ಕಾಂತಾರ ಸಿನಿಮಾ ಕೃಷಿ, ಊಳಿಗಮಾನ್ಯ ಪದ್ಧತಿ, ಭೂ ಒತ್ತುವರಿ, ಪರಿಸರ ಸಂರಕ್ಷಣೆ ವಿಚಾರಗಳು, ಮಾನವ ಮತ್ತು ಪ್ರಕೃತಿ ಸಂಘರ್ಷ, ಶಿವನ ಪಯಣ ಇತ್ಯಾದಿಗಳ ಕುರಿತು ಚರ್ಚೆಗೆ ಎಡೆಮಾಡಿಕೊಟ್ಟಿದೆ ಎಂದು ವಿವರಿಸಿದ ರಿಷಬ್, ಕಾಂತಾರ ಚಿತ್ರದ ಪ್ರಮುಖ ಪಾತ್ರವಾದ ತಂದೆಯ ದೈವತ್ವವು ವ್ಯಾಪಕ ಆಳವನ್ನು ಹೊಂದಿದೆ ಮತ್ತು ಇದರ ಹಿನ್ನೆಲೆಯನ್ನು ಪ್ರೀಕ್ವೆಲ್‌ನಲ್ಲಿ ಪ್ರಸ್ತುತಪಡಿಸಲಾಗುತ್ತದೆ ಎಂದರು. 

ದೊಡ್ಡ ಬಜೆಟ್‌ನಲ್ಲಿ ಚಿತ್ರ ತಯಾರಾಗಲಿದ್ದು, ಕಾಂತಾರವನ್ನು ಮೀರಿಸುತ್ತದೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ. ರಿಷಬ್, ಅವರ ತಂಡದ ಬರಹಗಾರರಾದ ಅನಿರುದ್ಧ್ ಮಹೇಶ್ ಮತ್ತು ಶನಿಲ್ ಗುರು ಅವರೊಂದಿಗೆ ಸ್ಕ್ರಿಪ್ಟ್ ಅನ್ನು ಸಿದ್ಧಪಡಿಸಿದ್ದಾರೆ. ನಿರ್ದೇಶನದ ಜೊತೆಗೆ ತಾವೇ ನಾಯಕನಾಗಿಯೂ ನಟಿಸುತ್ತಿರುವ ರಿಷಬ್, ಹೆಚ್ಚಿನ ವಿವರಗಳನ್ನು ಮುಚ್ಚಿಟ್ಟಿದ್ದಾರೆ. ಆದರೆ, ಈ ಪಾತ್ರಕ್ಕಾಗಿ ರಿಷಬ್ ದೈಹಿಕ ರೂಪಾಂತರಕ್ಕೆ ಒಳಗಾಗುತ್ತಾರೆ ಎಂಬುದು ಸ್ಪಷ್ಟವಾಗಿದೆ.

ಕಾಂತಾರ ಚಿತ್ರದಲ್ಲಿ ನಾಯಕಿಯಾಗಿ ಸಪ್ತಮಿ ಗೌಡ, ಕಿಶೋರ್ ಕುಮಾರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಸಾದ್ ತೂಮಿನಾಡ್, ಸ್ವರಾಜ್ ಶೆಟ್ಟಿ ಮತ್ತು ಮಾನಸಿ ಸುಧೀರ್ ಮುಂತಾದವರು ನಟಿಸಿದ್ದರು. ಪ್ರಿಕ್ವೆಲ್‌ಗೆ ಚಿತ್ರತಂಡ ಈಗಾಗಲೇ ಬಹುತೇಕ ಸ್ಥಳಗಳನ್ನು ಅಂತಿಮಗೊಳಿಸಿದ್ದು, ನಟರ ಗುಂಪನ್ನು ಶಾರ್ಟ್‌ಲಿಸ್ಟ್ ಮಾಡಿದ್ದಾರೆ. ಕೆಲವು ನಟರು ತಮ್ಮ ಪಾತ್ರಗಳನ್ನು ಪುನರಾವರ್ತಿಸುತ್ತಿದ್ದಾರೆ ಎಂದು ರಿಷಬ್ ಪ್ರಸ್ತಾಪಿಸಿದ್ದು, ಈ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾಗೆ ಸೇರ್ಪಡೆಗೊಳ್ಳುವ ಹೊಸ ಹೆಸರುಗಳನ್ನು ನಾವು ಕಾದು ನೋಡಬೇಕಾಗಿದೆ. ತಂತ್ರಜ್ಞರಿಗೆ ಸಂಬಂಧಿಸಿದಂತೆ, ಕಾಂತಾರ ಪ್ರೀಕ್ವೆಲ್ ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ಮತ್ತು ಛಾಯಾಗ್ರಾಹಕ ಅರವಿಂದ್ ಎಸ್ ಕಶ್ಯಪ್ ಅವರ ಮರಳುವಿಕೆಯನ್ನು ಒಳಗೊಂಡಿದೆ.

Leave a Reply

Your email address will not be published. Required fields are marked *

error: Content is protected !!