ಆರೋಗ್ಯ ಕ್ಷೇತ್ರದ ಭವಿಷ್ಯವನ್ನು ರೂಪಿಸುವ ವೃತ್ತಿಪರರಾಗಿ- ಡಾ. ನರೇಂದ್ರ ಕೊತ್ವಾಲ್
ಉಡುಪಿ: ಆರೋಗ್ಯ ಕ್ಷೇತ್ರದ ಭವಿಷ್ಯವನ್ನು ರೂಪಿಸುವ ವೃತ್ತಿಪರರಾಗಿ. ದೇಶದೊಳಗೆ ಹಾಗೂ ಹೊರಗೆ ಬೀಸುತ್ತಿರುವ ಪರಿವರ್ತನೆಯ ಗಾಳಿಯಲ್ಲಿ ನಮ್ಮ ಪರಂಪರೆ ಹಾಗೂ ಆತ್ಮವಿಶ್ವಾಸದ ಮೂಲಕ ಜಾಗತಿಕವಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸಿ ಎಂದು ಪುಣೆಯ ಸಶಸ್ತ್ರ ದಳ ಮೆಡಿಕಲ್ ಕಾಲೇಜಿನ (ಎಎಫ್‌ಎಂಸಿ) ನಿರ್ದೇಶಕ ಹಾಗೂ ಕಮಾಂಡೆಂಟ್ ಲೆ.ಜ. (ಡಾ.) ನರೇಂದ್ರ ಕೊತ್ವಾಲ್ ಹೇಳಿದ್ದಾರೆ.
ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಇಂದು ನಡೆದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ)ಯ 31ನೇ ಘಟಿಕೋತ್ಸವದ ಮೊದಲ ದಿನದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್. ಎಸ್.ಬಲ್ಲಾಳ್, 1953ರಲ್ಲಿ ದೇಶದ ಮೊತ್ತಮೊದಲ ಖಾಸಗಿ ಮೆಡಿಕಲ್ ಕಾಲೇಜಾಗಿ ಪ್ರಾರಂಭಗೊಂಡ ಕೆಎಂಸಿ, ಕಳೆದ ಎರಡು ದಶಕಗಳಿಂದ ದೇಶದಲ್ಲಿ ಈಗಿರುವ 600ಕ್ಕೂ ಅಧಿಕ ಮೆಡಿಕಲ್ ಕಾಲೇಜುಗಳಲ್ಲಿ ಅಗ್ರ 10 ಮೆಡಿಕಲ್ ಕಾಲೇಜುಗಳಲ್ಲಿ ಒಂದು ಸ್ಥಾನವನ್ನು ಪಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಹೆಯ ಉಪಕುಲಪತಿ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್, ರಿಜಿಸ್ಟ್ರಾರ್ ಡಾ.ಗಿರಿಧರ್ ಕಿಣಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಒಟ್ಟು ನಾಲ್ಕು ದಿನಗಳ ಕಾಲ ನಡೆಯುವ ಘಟಿಕೋತ್ಸವದಲ್ಲಿ ಮಾಹೆಯ ವಿವಿಧ ಪದವಿ ವಿಭಾಗಗಳ ಸುಮಾರು 7000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಗುತ್ತದೆ.
2ನೇ ದಿನವಾದ ಇಂದು ನಡೆಯುವ ಘಟಿಕೋತ್ಸವ ಸಮಾರಂಭದಲ್ಲಿ ಕೇಂದ್ರ ಸರಕಾರದ ಡ್ರಗ್ಸ್ ಕಂಟ್ರೋಲರ್ ಜನರಲ್ ಆಗಿರುವ ಡಾ.ರಾಜೀವ್ ಸಿಂಘ್ ರಘುವಂಶಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.