ನೇಜಾರು ತಾಯಿ, ಮಕ್ಕಳ ಹತ್ಯೆ ಪ್ರಕರಣ: ಆರೋಪಿ ಪ್ರವೀಣ್ ಮನೆಯಿಂದ ಕೃತ್ಯಕ್ಕೆ ಬಳಸಿದ ಚೂರಿ ವಶ

ಉಡುಪಿ, ನ.18: ನೇಜಾರು ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ (39) ಕೃತ್ಯ ಎಸಗಲು ಬಳಸಿದ್ದ ಚೂರಿಯನ್ನು ವಶಪಡಿಸಿಕೊಳ್ಳುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನ.15ರಂದು ಬೆಳಗಾವಿಯ ಕುಡುಚಿಯಲ್ಲಿ ಪ್ರವೀಣ್ ಚೌಗುಲೆಯನ್ನು ಪೊಲೀಸರು ಬಂಧಿಸಿ, ನ.16ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದರು. ನಂತರ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಕೃತ್ಯಕ್ಕೆ ಬಳಸಿದ ಆಯುಧಕ್ಕಾಗಿ ಶೋಧ ಕಾರ್ಯ ನಡೆಸಿದ್ದರು.

ವಿಚಾರಣೆಯಲ್ಲಿ ಸಮರ್ಪಕ ಮಾಹಿತಿ ನೀಡದೆ ಆರೋಪಿ ಪೊಲೀಸರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದನು. ಮೊದಲು ಕೃತ್ಯಕ್ಕೆ ಎಸಗಿ ಉಡುಪಿಯಿಂದ ಮಂಗಳೂರಿಗೆ ಹೋಗುವಾಗ ದಾರಿ ಮಧ್ಯೆ ಸೇತುವೆಯಿಂದ ನದಿಗೆ ಎಸೆದಿದ್ದೆ ಎಂದು ಹೇಳಿದ್ದ ಪ್ರವೀಣ್, ಬಳಿಕ ಅದನ್ನು ತನ್ನ ಮಂಗಳೂರಿನ ಮನೆಯ ಬಳಿ ವಿಲೇವಾರಿ ಮಾಡಿದ್ದೆ ಎಂದು ತಿಳಿಸಿದ್ದನು.

ಈ ಆಧಾರದಲ್ಲಿ ಮನೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಆಯುಧಕ್ಕಾಗಿ ತೀವ್ರ ಶೋಧ ನಡೆಸಿದಾಗ, ಆತನ ಬಿಜೈ ಫ್ಲ್ಯಾಟ್‌ನಲ್ಲಿ ಕೃತ್ಯಕ್ಕೆ ಬಳಸಿಕ ಚೂರಿ ಪತ್ತೆಯಾಗಿತ್ತು. ಅದಲ್ಲದೆ ಕೃತ್ಯಕ್ಕೆ ಬಳಸಿದ ಮಾಸ್ಕ್, ರಕ್ತಸಿಕ್ಕ ಬಟ್ಟೆ, ಕೃತ್ಯಕ್ಕೆ ಬಳಸಿದ ಕಾರು ಸೇರಿದಂತೆ ಎಲ್ಲ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

‘ಆರೋಪಿ ಪ್ರವೀಣ್ ಚೌಗುಲೆ ಅಪರಾಧ ಕೃತ್ಯ ಎಸಗುವ ಸಂದರ್ಭದಲ್ಲಿ ಬಳಸಿದ ಚೂರಿ ಮತ್ತು ಇತರ ವಸ್ತುಗಳನ್ನು ನಿನ್ನೆ ಮತ್ತು ಇಂದು ವಶಕ್ಕೆ ಪಡೆದು ಕೊಳ್ಳಲಾಗಿದೆ. ಉಳಿದ ಮಾಹಿತಿಗಳನ್ನು ತನಿಖೆ ಸಂಪೂರ್ಣಗೊಂಡ ಬಳಿಕ ನೀಡಲಾಗುವುದು’

ಡಾ.ಕೆ.ಅರುಣ್, ಎಸ್ಪಿ, ಉಡುಪಿ”

Leave a Reply

Your email address will not be published. Required fields are marked *

error: Content is protected !!