ಸೈಕೋ ಕಿಲ್ಲರ್ ರೀತಿ ಕೃತ್ಯವೆಸಗಿದ ಆರೋಪಿ ಪ್ರವೀಣ್ ಚೌಗಲೆ- ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಉಡುಪಿ: ಜಿಲ್ಲೆಯ ನೇಜಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ಭೇಟಿ ನೀಡಿದರು.

ಕಳೆದ ಭಾನುವಾರ ತಾಯಿ, ಮಗಳು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಅಮಾನುಷವಾಗಿ ಕೊಲೆ ಮಾಡಲಾಗಿತ್ತು. ಮೃತ ಹಸೀನಾ ಪತಿ ನೂರ್ ಮೊಹಮದ್ ಹಾಗೂ ಅವರ ಮಗ ಆಸಾದ್ ಹಾಗೂ ಕುಟುಂಬದ ಇತರ ಸದಸ್ಯರನ್ನು ಭೇಟಿಯಾದ ಸಚಿವರು ಅವರಿಗೆ ಸಾಂತ್ವನ ಹೇಳಿದರು. ಕುಟುಂಬ ಸದಸ್ಯರಿಗೆ ನ್ಯಾಯ ಕುಟುಂಬದ ನಾಲ್ಕ ಸದಸ್ಯರನ್ನು ಅಮಾನುಷವಾಗಿ ಕೊಂದ ವ್ಯಕ್ತಿ ರಾಕ್ಷಸ ಕೃತ್ಯ ಎಸಗಿದ್ದಾನೆ. ಮೃತರ ಕುಟುಂಬದ ಜೊತೆ ಸರ್ಕಾರವಿದ್ದು, ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದೇನೆ ಎಂದು ಸಚಿವರು ಪತ್ರಕರ್ತರಿಗೆ ತಿಳಿಸಿದರು.

ಆರೋಪಿಯನ್ನು ತ್ವರಿತವಾಗಿ ಬಂಧಿಸುವ ಮೂಲಕ ಪೊಲೀಸ್ ಇಲಾಖೆ ಒಳ್ಳೆಯ ಕೆಲಸ ಮಾಡಿದ್ದು, ಆದಷ್ಟು ಬೇಗ ನ್ಯಾಯ ದೊರಕಿಸಲು ಪ್ರಯತ್ನ ಮಾಡುತ್ತೇವೆ ಎಂದರು. ಉಡುಪಿ ಜಿಲ್ಲೆ ಶಾಂತಿ ಪ್ರಿಯ ಜಿಲ್ಲೆ, ಇಂತಹ ಜಿಲ್ಲೆಯಲ್ಲಿ ಹೀಗಾಗಬಾರದಿತ್ತು. ಮುಂಜಾಗ್ರತಾ ಕ್ರಮ ಕೈಗೊಳ್ಖುತ್ತೇವೆ, ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು.

ಆರೋಪಿ ಸೈಕೋ ರೀತಿಯಲ್ಲಿ ವರ್ತಿಸಿದ್ದಾನೆ. 20 ನಿಮಿಷದಲ್ಲಿ ಕೃತ್ಯವೆಸಗಿದ ಆತನ ಮೆಂಟಲ್ ಸ್ಟೇಟಸ್ ಯಾವ ರೀತಿ ಇರಬಹುದು?. ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದ ಮೂಲಕ ತನಿಖೆಗೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಸೂಕ್ತ ರೀತಿಯಲ್ಲಿ ತನಿಖೆ ಮಾಡಿಸಲಾಗುವುದು ಎಂದರು. ನಾನು ಬೆಳಗಾವಿ ಯಲ್ಲಿದ್ದರೂ ಸಂತ್ರಸ್ತ ಕುಟುಂಬದ ಜೊತೆಗೆ, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಟರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಮೃತ ಮಹಿಳೆಯ ಸಹೋದರರಿಗೆ ಕರೆ ಮಾಡಿ ಸಂಪೂರ್ಣ ಮಾಹಿತಿ ಪಡೆದಿದ್ದೆ ಎಂದು ಸಚಿವರು ಹೇಳಿದರು.

ಈ ವೇಳೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ, ಕಾಂಗ್ರೆಸ್ ಮುಖಂಡರಾದ ಗೋಪಾಲ್ ಪೂಜಾರಿ, ಪ್ರಸಾದ್‌ರಾಜ್ ಕಾಂಚನ್, ಮುನಿಯಲ್ ಉದಯ್ ಶೆಟ್ಟಿ, ರಮೇಶ್ ಕಾಂಚನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!