ಜ.22ರಂದು ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ: ಪೇಜಾವರ ಶ್ರೀ

ಉಡುಪಿ, ನ.16: ಅಯೋಧ್ಯೆ ಶ್ರೀರಾಮಜನ್ಮಭೂಮಿ ಯಲ್ಲಿ ರಾಮ ಮಂದಿರ ನಿರ್ಮಾಣದ ಭಾರತೀಯರ ಕನಸು 2024 ಜ.22ರಂದು ಪ್ರಾಣಪ್ರತಿಷ್ಠೆ ಸಹಿತ ರಾಮಮಂದಿರ ಲೋಕಾರ್ಪಣೆಯೊಂದಿಗೆ ನನಸಾಗಲಿದೆ ಎಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥರು ತಿಳಿಸಿದ್ದಾರೆ.

ಇಂದು ರಥಬೀದಿಯಲ್ಲಿರುವ ಪೇಜಾವರ ಮಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸಾರ್ವಜನಿಕರು, ರಾಮಭಕ್ತರು ತಮ್ಮ ಊರ ದೇವಳಗಳಲ್ಲಿ ಭಜನೆ, ಮಂಗಳಾರತಿ, ಉತ್ಸವ, ಸಂಜೆ ದೇವಸ್ಥಾನ ಹಾಗೂ ಮನೆಗಳಲ್ಲಿ ಐದು ದೀಪಗಳನ್ನು ಐದು ಶತಮಾನಗಳ ಹೋರಾಟದ ಸ್ಮರಣೆಗಾಗಿ ಬೆಳಗಬಹುದು ಎಂದು ಪೇಜಾವರಶ್ರೀ ತಿಳಿಸಿದರು.

48 ದಿನಗಳ ಮಂಡಲೋತ್ಸವ: ಜ.23ರಿಂದ ಮಾ.10 ರ ತನಕ ದಿನವೂ ರಾಮದೇವರಿಗೆ ಕಲಶಾಭಿಷೇಕ, ಯಜ್ಞಯಾಗ ಹಾಗೂ ಕೊನೆಯ 5 ದಿನಗಳ ಕಾಲ ಬ್ರಹ್ಮಕಲಶ ನಡೆಯಲಿದ್ದು ಶ್ರೀರಾಮ ದೇವರಿಗೆ ಸೇವೆ ಸಮರ್ಪಣೆಗೆ ಅವಕಾಶವನ್ನು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಧಾರ್ಮಿಕ ಸಮಿತಿ ವತಿಯಿಂದ ಕಲ್ಪಿಸಲಾಗಿದೆ. ಸೇವಾ ಸಮರ್ಪಣೆಗೆ ಯಾವುದೇ ಸೇವಾಪಟ್ಟಿ ರಾಮಮಂದಿರದಲ್ಲಿ ಇರದು ಎಂದವರು ವಿವರಿಸಿದರು.

48 ದಿನಗಳ ಮಂಡಲೋತ್ಸವ ಸಂದರ್ಭ ಭಕ್ತರಿಗೆ ಸೇವೆ ಒದಗಿಸಲು ಅಯೋಧ್ಯಾ ಮಂಡಲೋತ್ಸವ.ಕಾಂ ಮೂಲಕ ನೋಂದಣಿ, ಕಲಶಾಭಿಷೇಕಕ್ಕೆ ಅವಕಾಶವಿದೆ. ಒಂದು ಕೆ.ಜಿ.ರಜತ ಕಲಶಕ್ಕೆ ಒಂದು ಲಕ್ಷ ರೂ. ಸೇವಾ ಶುಲ್ಕ ನಿಗದಿ ಪಡಿಸಿದ್ದು 2023-24ನೇ ಸಾಲಿನಲ್ಲಿ 10ಲಕ್ಷ ರೂ.ಮೌಲ್ಯದ ಸೇವೆ ಒದಗಿಸಿದವರು ಇದಕ್ಕೆ ಅರ್ಹರಾಗಿದ್ದಾರೆ. ಮನೆ ನಿರ್ಮಾಣಕ್ಕೆ ನೆರವು, ಗೋವು ದತ್ತು, ಶೈಕ್ಷಣಿಕ ನೆರವು, ವೈದ್ಯಕೀಯ ನೆರವು ನೀಡಿದ್ದನ್ನು ಗಜೆಟ್ ಅಧಿಕಾರಿಗಳಿಂದ ಪ್ರಮಾಣೀಕರಿಸಿ ಅಪ್ ಲೋಡ್ ಮಾಡಬೇಕು. ಪ್ರಸಾದ ಸಹಿತ ಕಲಶವನ್ನು ಸೇವಾದಾರರಿಗೆ ನೀಡಲಾಗುವುದು ಎಂದರು.

44 ದಿನಗಳಲ್ಲಿ ದಿನಕ್ಕೆ 1,2 ಕಲಶ ಅಭಿಷೇಕವಾದರೆ ಉಳಿದ ನಾಲ್ಕು ದಿನಗಳಲ್ಲಿ ಸಹಸ್ರ ಕಲಶಾಭಿಷೇಕ ನೆರವೇರಲಿದೆ. ರಾಮಭಕ್ತಿ, ದೇಶಭಕ್ತಿಯ ನೆಲೆಯಲ್ಲಿ ರಾಮಮಂದಿರದಿಂದ ರಾಮರಾಜ್ಯದೆಡೆಗೆ ನಾವು ಸಾಗಬೇಕು. ಡಿ.1ರಂದು ಅಯೋಧ್ಯಾ ಮಂಡಲೋತ್ಸವ.ಕಾಂ ಲೋಕಾರ್ಪಣೆಯಾಗಲಿದ್ದು ಇಂದಿನಿಂದ ಹೆಸರು ನೋಂದಾಯಿಸಬಹುದು. ರೋಬೋಸಾಫ್ಟ್ ಆ್ಯಪ್ ರೂಪಿಸಿದ್ದು ವ್ಯವಹಾರ ಪಾರದರ್ಶಕವಾಗಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ಕೆ.ರಘುಪತಿ ಭಟ್, ನಂದಕಿಶೋರ್, ಶ್ರೀನಿಧಿ ಶೆಟ್ಟಿಗಾರ್, ಸುಬ್ರಹ್ಮಣ್ಯ ಭಟ್,ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!