ಮಣಿಪಾಲ: ನ.18ರಿಂದ ‘ಸಂಸ್ಕಾರ’ ಚಿತ್ರಕಲಾ ಪ್ರದರ್ಶನ
ಉಡುಪಿ, ನ.16: ಮಣಿಪಾಲದ ತ್ರಿವರ್ಣ ಆರ್ಟ್ ಸೆಂಟರ್‌ನಿಂದ ‘ಸಂಸ್ಕಾರ’ ವಿಷಯದ ಮೇಲಿನ ಮೂರು ದಿನಗಳ ವರ್ಣ ಚಿತ್ರಕಲಾ ಪ್ರದರ್ಶನ ನ.18ರಿಂದ 20ರವರೆಗೆ ಮೂರು ದಿನಗಳ ಕಾಲ ಮಣಿಪಾಲದ ತ್ರಿವರ್ಣ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ ಎಂದು ಕೇಂದ್ರದ ಕಲಾವಿದ ಹಾಗೂ ಮಾರ್ಗದರ್ಶಕ ಹರೀಶ್ ಸಾಗಾ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಣಿಪಾಲ ಹಾಗೂ ಕುಂದಾಪುರದಲ್ಲಿರುವ ತ್ರಿವರ್ಣ ಕಲಾಕೇಂದ್ರ ಅಲ್ಲದೇ ಆನ್‌ಲೈನ್ ಮೂಲಕ ಚಿತ್ರಕಲೆಯನ್ನು ಅಭ್ಯಸಿಸುತ್ತಿರುವ ಒಟ್ಟು 39 ಮಂದಿ ಕಿರಿಯರ ವಿಭಾಗದ ಕಲಾ ವಿದ್ಯಾರ್ಥಿಗಳು ಇದರಲ್ಲಿ ತಾವು ರಚಿಸಿದ ವರ್ಣಚಿತ್ರಗಳನ್ನು ಪ್ರದರ್ಶಿಸಲಿದ್ದಾರೆ ಎಂದರು.
ಈ ಚಿತ್ರಕಲಾ ಪ್ರದರ್ಶನಕ್ಕೆ ಹಿರಿಯರ ಆಚಾರ, ವಿಚಾರ, ಅನಾದಿ ಕಾಲದಿಂದ ಆಚರಿಸಿಕೊಂಡು ಬರುತ್ತಿರುವ ಪದ್ಧತಿ, ಪರಂಪರೆಗಳನ್ನು ವಸ್ತುವಾಗಿ ನೀಡಲಾಗಿದೆ. ಕಲಾ ವಿದ್ಯಾರ್ಥಿಗಳು ತಾವು ಕಂಡ ಯಾವುದೇ ಸಂಪ್ರದಾಯ, ಆಚಾರ-ವಿಚಾರಗಳನ್ನು ಬಣ್ಣದಲ್ಲಿ ಮೂಡಿಸಲಿದ್ದಾರೆ ಎಂದರು.
ಇದಕ್ಕಾಗಿ 18 ವರ್ಷದೊಳಗಿನ 39 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದು, ಅವರು ಅಕ್ರಾಲಿಕ್, ಜಲವರ್ಣ, ಪೋಸ್ಟರ್ ಪೆನ್ಸಿಲ್, ಚಾರ್ಕೋಲ್, ಬಣ್ಣದ ಮೂಲಕ ತಮ್ಮ ಕಲೆಯನ್ನು ‘ಸಂಸ್ಕಾರ’ದ ಮೂಲಕ ಪ್ರದರ್ಶಿಸಲಿದ್ದಾರೆ ಎಂದು ಹರೀಶ್ ಸಾಗಾ ತಿಳಿಸಿದರು.
ಹೀಗಾಗಿ 3 ದಿನಗಳ ಚಿತ್ರಕಲಾ ಪ್ರದರ್ಶನದಲ್ಲಿ ನೇಮ, ದೇವ ದರ್ಶನ, ಹೂ ಕಟ್ಟುವುದು, ಅಕ್ಷರಾಭ್ಯಾಸ, ಸಮುದ್ರ ಪೂಜೆ, ಗೃಹ ಪ್ರವೇಶ, ವಿಶು ಹಬ್ಬ, ಗೋ ಪೂಜೆ, ನಾಗ ಮಂಡಲ, ಸಂಕ್ರಾತಿ, ಎಲೆ ಭೋಜನ, ರಂಗೋಲಿ, ಚೌತಿ, ನವ ರಾತ್ರಿ, ತುಳಸಿಪೂಜೆಗಳೆಲ್ಲಾ ಕಲಾರೂಪ ತಳೆಯಲಿವೆ. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾರ್ವಜನಿಕ ರಿಂದ ಮೂರು ಅತ್ಯುತ್ತಮ ಕಲಾಕೃತಿಯನ್ನು ಆಯ್ಕೆ ಮಾಡಿ ಬಹುಮಾನ ನೀಡಲಾಗುವುದು ಎಂದರು.
ಚಿತ್ರಕಲಾ ಪ್ರದರ್ಶನವನ್ನು ನ.18ರಂದು ಬೆಳಗ್ಗೆ 10ಗಂಟೆಗೆ ನಿವೃತ್ತ ಕನ್ನಡ ಪ್ರಾಧ್ಯಾಪಕ ಹಾಗೂ ಹಿರಿಯ ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣು ಭಟ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಾರಕೂರಿನ ಆರ್.ದಾಮೋದರ ಶರ್ಮ, ರಂಗಭೂಮಿ ಕಲಾವಿದೆ ಪೂರ್ಣಿಮಾ ಸುರೇಶ್, ಅಮಿತಾಂಜಲಿ ಕಿರಣ್ ಉಪಸ್ಥಿತರಿರುವರು ಎಂದರು.
ಪ್ರದರ್ಶನವು ನ.18ರಿಂದ 20ರವರೆಗೆ ಬೆಳಗ್ಗೆ 10ರಿಂದ ಸಂಜೆ 7:30ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ಹರೀಶ್ ಸಾಗಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಲಾವಿದರ ಪೋಷಕರಾದ ಡಾ.ಶಿವರುದ್ರ ಸ್ವಾಮಿ, ಅರವಿಂದ ಪಂಡಿತ್, ಕವಿತಾ ನಾಯಕ್, ವಿನುತಾ, ವಿಜಯಲಕ್ಷ್ಮೀ ಹಾಗೂ ಪಲ್ಲವಿ ಉಪಸ್ಥಿತರಿದ್ದರು.