ಪತ್ನಿ, ಮಕ್ಕಳ ಹತ್ಯೆಯ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ನೂರ್ ಮುಹಮ್ಮದ್ ಆಗ್ರಹ

ಉಡುಪಿ, ನ.14: ನನ್ನ ಪತ್ನಿ ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ತನಿಖೆಗೆ ನಾನು ದಿನ 24ಗಂಟೆಗಳ ಕಾಲವೂ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ. ಪೊಲೀಸರು ಕ್ಷಿಪ್ರಗತಿಯಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವ ಮೂಲಕ ನಮಗೆ ನ್ಯಾಯ ಒದಗಿಸಬೇಕು ಎಂದು ನೂರ್ ಮುಹಮ್ಮದ್ ಒತ್ತಾಯಿಸಿದ್ದಾರೆ.

ನೇಜಾರು ಸಮೀಪದ ತೃಪ್ತಿ ಲೇಔಟ್‌ನಲ್ಲಿರುವ ತನ್ನ ಮನೆಯಲ್ಲಿ ಮಾಧ್ಯಮದವರೊಂದಿಗೆ ಇಂದು ಮಾತನಾಡಿದ ಅವರು, ಪ್ರಕರಣದ ತನಿಖಾಧಿಕಾರಿಗಳಿ ಗೆ ನನ್ನ ಬಳಿ ಇರುವ ಎಲ್ಲ ರೀತಿಯ ಮಾಹಿತಿಗಳನ್ನು ನೀಡಿದ್ದೇನೆ. ನನ್ನ ಮತ್ತು ಮಕ್ಕಳ 4 ಮೊಬೈಲ್‌ಗಳನ್ನು ಅವರಿಗೆ ಒಪ್ಪಿಸಿದ್ದೇನೆ. ಅದರಲ್ಲಿ ಏನಾದರೂ ಸುಳಿವು ಸಿಗಬಹುದು ಎಂಬ ಕಾರಣಕ್ಕೆ ಅದನ್ನು ಪೊಲೀಸರಿಗೆ ನೀಡಿದ್ದೇನೆ. ನನ್ನ ಮತ್ತು ಮಗನ ಮೊಬೈಲ್‌ಗಳನ್ನು ಪೊಲೀಸರು ನಿನ್ನೆ ಸಂಜೆ ವಾಪಾಸ್ಸು ಕೊಟ್ಟಿದ್ದಾರೆ. ಮೊಬೈಲ್‌ನಲ್ಲಿ ಪೊಲೀಸರಿಗೆ ಕೆಲವು ಮಾಹಿತಿ ದೊರೆತಿದೆ ಎಂಬುದು ತಿಳಿದುಬಂದಿದೆ ಎಂದರು.

ಯಾವುದೇ ಕೌಟುಂಬಿಕ ಕಲಹ ನಡೆದಿಲ್ಲ

ಕೆಲವು ಮಾಧ್ಯಮಗಳಲ್ಲಿ ಈ ಕೊಲೆಗೆ ಕೌಟುಂಬಿಕ ಕಲಹ ಕಾರಣ ಎಂಬುದಾಗಿ ಸುದ್ದಿ ಬಂದಿದ್ದು, ಅದನ್ನು ಕೇಳಿ ನನಗೆ ಆಘಾತ ಆಗಿದೆ. ಅದರಲ್ಲಿ ಯಾವುದೇ ರೀತಿಯ ಸತ್ಯಾಂಶ ಇಲ್ಲ. ಎಲ್ಲವೂ ಸುಳ್ಳು ಎಂದು ನೂರ್ ಮುಹಮ್ಮದ್ ಸ್ಪಷ್ಟಪಡಿಸಿದರು.

ನಾನು ಮದುವೆಯಾಗಿ 30 ವರ್ಷಗಳಾಗಿವೆ. 15 ವರ್ಷಗಳ ಕಾಲ ನನ್ನ ಹೆಂಡ್ತಿ ಮತ್ತು ಮಕ್ಕಳು ನನ್ನ ಜೊತೆ ರಿಯಾದ್‌ನಲ್ಲಿಯೇ ಇದ್ದರು. ಕಳೆದ ರಂಝಾನ್ ಹಬ್ಬದ ಸಂದರ್ಭ ನಾವೆಲ್ಲ ಮಕ್ಕಾ ಮದೀನದಲ್ಲಿ ಉಮ್ರಾ ಮಾಡಿ ಹಬ್ಬ ಆಚರಿಸಿ ಊರಿಗೆ ಬಂದಿದ್ದೇವೆ. ಮತ್ತೆ 15ದಿನಗಳಲ್ಲಿ ಅವರು ವಾಪಾಸ್ಸು ಸೌದಿಗೆ ಬರಲು ಸಿದ್ಧರಾಗಿದ್ದರು. ಈ ದುರ್ಘಟನೆ ನಡೆದಿರುವುದರಿಂದ ನಾನು ತುರ್ತಾಗಿ ಬರುವಂತಾಯಿತು ಎಂದು ಅವರು ತಿಳಿಸಿದರು.


ಮಕ್ಕಳ ಮದುವೆಗೆ ಯೋಜನೆ ಹಾಕಿದ್ದೆ….

ನನ್ನ ಮಗಳು ಐನಾಝ್ ಏರ್ ಇಂಡಿಯಾದಲ್ಲಿ ಗಗನಸಖಿಯಾಗಿದ್ದು ಬೆಳಗ್ಗೆ 11ಗಂಟೆಗೆ ಅವಳಿಗೆ ದುಬೈ ಹೋಗಲು ಇತ್ತು. ಸೌದಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ನನ್ನ ದೊಡ್ಡ ಮಗಳು ಮಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದಳು. ಒಂದು ವರ್ಷದ ಶಿಕ್ಷಣ ಮುಗಿದ ಮಾಡಿದ ಬಳಿಕ ಮತ್ತೆ ಸೌದಿಗೆ ಹೋಗುವ ಯೋಜನೆ ಅವಳಿಗೆ ಇತ್ತು ಎಂದು ನೂರ್ ಮುಹಮ್ಮದ್ ಹೇಳಿದರು.

ಮುಂದಿನ ವರ್ಷ ಮನೆಗೆ ಪೈಂಟ್ ಮಾಡಿ ದೊಡ್ಡ ಮಗ ಮತ್ತು ಮಗಳಿಗೆ ಮದುವೆ ಮಾಡುವ ಯೋಜನೆ ಕೂಡ ನನ್ನ ಮುಂದೆ ಇತ್ತು ಎಂದು ಅವರು ತಿಳಿಸಿದರು. ಕೊಲೆಯಾದ ಮಾಹಿತಿ ಸಿಕ್ಕದ ಕೂಡಲೇ ಹೊರಡಲು ಸಿದ್ಧನಾದೆ. ಆದರೆ ನೇರ ವಿಮಾನ ಸಿಗಲಿಲ್ಲ. ಬಳಿಕ ನಮ್ಮ ಮೆನೇಜರ್ ವ್ಯವಸ್ಥೆ ಮಾಡಿ ಕೊಟ್ಟರು. ಅದಕ್ಕಾಗಿ ರಿಯಾದ್‌ನಿಂದ ರಸ್ತೆಯ ಮೂಲಕ ದಮಾಮ್‌ಗೆ, ದಮಾಮ್‌ನಿಂದ ಬೆಹೆರೈನ್ ಬಂದು, ಅಲ್ಲಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್‌ನಲ್ಲಿ ನೇರವಾಗಿ ಇಲ್ಲಿಗೆ ಬಂದೆ ಎಂದು ಅವರು ಮಾಹಿತಿ ನೀಡಿದರು.

ಹಣಕಾಸಿನ ವಿಚಾರ ಸಾರ್ವಜನಿಕವಾಗಿ ಹೇಳಲ್ಲ

ಹಣಕಾಸಿನ ವಿಚಾರದ ಬಗ್ಗೆ ನಾನು ಸಾರ್ವಜನಿಕವಾಗಿ ಏನು ಹೇಳಲು ಬಯಸುವುದಿಲ್ಲ. ನನ್ನ ಖಾಸಗಿ ಜೀವನದಲ್ಲಿ ಏನೇ ನಷ್ಟವಾದರೂ ಅದು ನನಗೆ ಎಂದು ನೂರ್ ಮುಹಮ್ಮದ್ ತಿಳಿಸಿದರು.

ಪೊಲೀಸ್ ಇಲಾಖೆ ಆದಷ್ಟು ಬೇಗ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲಿನ ಸುತ್ತಮುತ್ತಲಿನ ಜನ ಭಯ ಭೀತರಾಗಿದ್ದಾರೆ. ನೆರೆಮನೆಯಲ್ಲಿರುವ ನನ್ನ ಪತ್ನಿಯ ಅಣ್ಣನ ಮನೆಯವರು ಇಲ್ಲಿ ಇರಲು ಭಯ ಪಡುತ್ತಿದ್ದಾರೆ ಎಂದರು.

ಮಗನನ್ನು ಹೊರಗಡೆ ಕಳುಹಿಸಲು ಹೆದರಿಕೆಯಾಗುತ್ತಿದೆ. ನಮ್ಮ ಹಿಂದೆ, ನಮ್ಮ ಸುತ್ತಮುತ್ತ ಯಾರಿದ್ದಾರೆ ನಮಗೆ ಗೊತ್ತಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!