ಕುಂದಾಪುರ: ಭಾರತೀಯ ಸೇನೆಗೆ ಸೇರಿದ ಸುನಿತಾ ಪೂಜಾರಿಗೆ ಅದ್ದೂರಿ ಸ್ವಾಗತ

ಕುಂದಾಪುರ: ಬಿಎಸ್‌ಎಫ್ ಕ್ಯಾಂಪ್‌ನಲ್ಲಿ 11 ತಿಂಗಳ ಕಾಲ ತರಬೇತಿ ಪಡೆದು ಭಾರತ ಸೇನೆಯಿಂದ ಭಾರತ-ಬಾಂಗ್ಲಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜಿತರಾದ ಹೆಮ್ಮಾಡಿ ಮೂಲದ ಸಂಜೀವ-ಗಂಗಾ ದಂಪತಿ ಪುತ್ರಿ ಸುನಿತಾ ಪೂಜಾರಿ ಅವರನ್ನು ಕುಂದಾಪುರದಲ್ಲಿ ರವಿವಾರ ಬೆಳಿಗ್ಗೆ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

ಇಲ್ಲಿನ ಶಾಸ್ತ್ರೀ ವೃತ್ತದಲ್ಲಿ ಸುನೀತಾ ಪೂಜಾರಿಯವರಿಗೆ ಅಭಿನಂದಿಸಿದ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸೈನ್ಯಕ್ಕೆ ಸೇರುವರ ಸಂಖ್ಯೆ ವಿರಳ. ಅದರಲ್ಲಿಯೂ ಓರ್ವ ಯುವತಿ ಉತ್ಸಾಹಿಯಾಗಿ ಮುಂದೆ ಬಂದಿ ರುವುದಕ್ಕೆ ಮನೆಯವರ ಪ್ರೋತ್ಸಾಹ ಕೂಡ ಕಾರಣ. ಇವರಿಂದ ಸ್ಪೂರ್ತಿಯಾಗಿ ಯುವಜನಾಂಗ ಸೈನಕ್ಕೆ ಸೇರಬೇಕು. ಬಿಲ್ಲವ ಸಮಾಜದ ಯುವತಿ ದೇಶ ಸೇವೆಗೆ ಪಣತೊಟ್ಟಿರುವುದು ನಮಗೂ ಹೆಮ್ಮೆಯ ಸಂಗತಿ ಎಂದರು.

ಈ ಸಂದರ್ಭದಲ್ಲಿ ಸೇನೆಗೆ ನಿಯೋಜನೆಗೊಂಡ ಪಂಜಾಬ್ ಮೂಲದ ಆಯಂತಿಕಾ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಪ್ರ. ಕಾರ್ಯದರ್ಶಿ ಗಣೇಶ್ ಪೂಜಾರಿ ವಿಠಲವಾಡಿ, ಉಪಾಧ್ಯಕ್ಷ ಶಿವರಾಮ ಪೂಜಾರಿ, ನಾರಾಯಣಗುರು ಯುವಕ ಮಂಡಲದ ಅಧ್ಯಕ್ಷ ಯೋಗೀಶ್ ಪೂಜಾರಿ ಕೋಡಿ, ರಮೇಶ್ ಪೂಜಾರಿ, ನಾಗರಿಕ ಹಿತರಕ್ಷಣಾ ವೇದಿಕೆಯ ಕೃಷ್ಣ ಪೂಜಾರಿ, ಹೆಮ್ಮಾಡಿ ರಿಕ್ಷಾ ಚಾಲಕ-ಮಾಲಕರ ಯೂನಿಯನ್ನ ಪ್ರವೀಣ್, ಯಾಸಿನ್ ಹೆಮ್ಮಾಡಿ ಮೊದಲಾದವರಿದ್ದರು. ರಾಜೇಶ್ ಕಡ್ಗಿಮನೆ ಸ್ವಾಗತಿಸಿ, ವಂದಿಸಿದರು.

ಸೇನೆಗೆ ನಿಯೋಜಿತರಾದ ಇಬ್ಬರು ಯುವತಿಯರು ಲಾಲ್ ಬಹದ್ದೂರ್ ಶಾಸ್ತ್ರಿ ಪ್ರತಿಮೆಗೆ ವಂದಿಸಿದರು. ಬಳಿಕ ಕುಂದಾಪುರದಿಂದ ತೆರದ ವಾಹನದಲ್ಲಿ ಹೆಮ್ಮಾಡಿ ತನಕ ವಾಹನ ಜಾಥಾ ಮೂಲಕ ಕರೆದೊಯ್ಯಲಾಯಿತು.

Leave a Reply

Your email address will not be published. Required fields are marked *

error: Content is protected !!