ಉಡುಪಿ: ಗಗನಸಖಿಯ ಮನೆಯಲ್ಲಿ ಹರಿಯಿತು ನೆತ್ತರ ಕೋಡಿ…!
ಉಡುಪಿ, ನ.12: ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಒಂದೇ ಕುಟುಂಬದ ನಾಲ್ವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಗೈದಿರುವ ಆರೋಪಿಯ ಪತ್ತೆಗೆ ಪೊಲೀಸರು ಬಲೆಬೀಸಿದ್ದು, ಶೀಘ್ರವಾಗಿ ಬಂಧಿಸುವ ಭರವಸೆಯನ್ನು ಉಡುಪಿ ಎಸ್ಪಿ ಡಾ.ಅರುಣ್ ಕುಮಾರ್ ಕೆ. ನೀಡಿದ್ದಾರೆ.
ಮಂಗಳೂರಿನಲ್ಲಿ ಏರ್ ಇಂಡಿಯಾದಲ್ಲಿ ಗಗನ ಸಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಪ್ಪತ್ತಮೂರು ವರ್ಷದ ಅಪ್ನಾನ್ ತನ್ನ ಸಹೋದರಿ ಲಾಜಿಸ್ಟಿಕ್ ಕಲಿಯುತ್ತಿರುವ ಅಯ್ನಾಝ್‌ಳೊಂದಿಗೆ ಕಳೆದ ರಾತ್ರಿ ನೇಜಾರಿನ ತೃಪ್ತಿ ಲೇಔಟ್‌ನ ಮನೆಗೆ ಬಂದಿದ್ದರು.
ಭಾನುವಾರ ಬೆಳಿಗ್ಗೆ 8.45 ಸುಮಾರಿಗೆ ಏಕಾಏಕಿ ಮನೆಗೆ ನುಗ್ಗಿ ಬಂದ ನಲವತ್ತೈದು ವರ್ಷದ ವ್ಯಕ್ತಿಯೊರ್ವ ಜಿಲ್ಲೆಯ ಇತಿಹಾಸದಲ್ಲೇ ಮೊದಲೇ ಎಂಬಂತೆ ಭೀಬತ್ಸವಾಗಿ ನಾಲ್ವರ ಹತ್ಯೆಗೈದು ಪರಾರಿಯಾಗಿದ್ದಾನೆ. ಸಂತೆಕಟ್ಟೆ ಜಂಕ್ಷನ್‌ನಿಂದ ರಿಕ್ಷಾದಲ್ಲಿ ಬಂದಿದ್ದ ಹಂತಕನಿಗೆ ಒಮ್ಮೆಲೆ ಗಗನ ಸಖಿಯ ಮನೆಯ ರಸ್ತೆ ಬಗ್ಗೆ ಸಂಶಯ ಬಂದು ತಾನು ಬಂದಿದ್ದ ರಿಕ್ಷಾ ಚಾಲಕನಲ್ಲಿ ವಿಚಾರಿಸುತ್ತಿದ್ದ ಅಷ್ಟರಲ್ಲಿ ತಾನು ಈ ಹಿಂದೆ ನೋಡಿದ್ದ ತೃಪ್ತಿ ಲೇಔಟ್‌ನ ನಾಮಫಲಕ ಕಂಡು ಅಲ್ಲೇ ರಿಕ್ಷಾ ತಿರುಗಿಸುವಂತೆ ಹೇಳಿದ್ದ. ಬಳಿಕ ಇಳಿದ ಹಂತಕ ನೇರ ಮನೆಯ ಒಳಗೆ ಹೋಗಿದ್ದ ಎಂದು ರಿಕ್ಷಾ ಚಾಲಕ ಶ್ಯಾಮ್ ಮಾಹಿತಿ ತಿಳಿಸಿದ್ದರು.
ಹದಿನೈದೆ ನಿಮಿಷಗಳಲ್ಲಿ ಮತ್ತೆ ಸಂತೆಕಟ್ಟೆ ಜಂಕ್ಷನ್‌ಗೆ ಬಂದ ಹಂತಕ!
ಮನೆಯಲ್ಲಿದ್ದ ನಾಲ್ವರನ್ನು ಹತ್ಯೆಗೈದ ಹಂತಕ ತಕ್ಷಣ ತಾನು ತಂದಿದ್ದ ಬ್ಯಾಗ್‌ನಲ್ಲಿ ಇನ್ನೊಂದು ಜೊತೆ ಬಟ್ಟೆಯನ್ನು ಧರಿಸಿ, ಸಂತೆಕಟ್ಟೆ ಕಡೆ ಹೋಗುವ ಬೈಕ್‌ನ್ನು ಏರಿ ಮತ್ತೆ ಅದೇ ಸ್ಟ್ಯಾಂಡ್‌ಗೆ ಹೋಗಿ ಕರಾವಳಿ ಬೈಪಾಸ್‌ಗೆ ಹೊರಟಿದ್ದ, ಆಗ ಮೊದಲು ರಿಕ್ಷಾ ದಲ್ಲಿ ಮನೆಗೆ ಬಿಟ್ಟಿದ್ದ ಚಾಲಕ ಇಷ್ಟು ಬೇಗ ಬರುವುದಿದ್ದರೆ ನಾನೇ ಕಾಯುತ್ತಿದ್ದೆ ಎಂದರು. ಆಗ ಆತ ಪರವಾಗಿಲ್ಲ ಎಂದು ಆತುರತುರವಾಗಿ ಬೇರೊಂದು ರಿಕ್ಷಾದಲ್ಲಿ ಉಡುಪಿ ಕಡೆ ಹೊರಟಿದ್ದ ಎನ್ನಲಾಗಿದೆ.
ಕೊಲೆಯಾದವರನ್ನು ಹಸೀನಾ(46), ಅವರ ಮಕ್ಕಳಾದ ಅಫ್ನಾನ್(23), ಅಯ್ನಾಝ್ (21) ಮತ್ತು ಅಸೀಮ್(14) ಎಂದು ಗುರುತಿಸಲಾಗಿದೆ. ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪರಿಚಿತ ವ್ಯಕ್ತಿಯೊಬ್ಬ ಬಿಳಿ ಬಣ್ಣದ ಶರ್ಟ್, ಬಿಳಿ ಬಣ್ಣದ ಮಾಸ್ಕ್ ಧರಿಸಿ ಬಂದು ಈ ಕೃತ್ಯ ಎಸಗಿರುವ ಮಾಹಿತಿ ಲಭ್ಯವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪತ್ತೆಗೆ ಐದು ಪೊಲೀಸ್ ತಂಡ ರಚನೆ: ಭೀಬತ್ಸವವಾಗಿ ಹತ್ಯೆಗೈದ ಆರೋಪಿ ಪತ್ತೆಗೆ ಡಿವೈಎಸ್‌ಪಿ ದಿನಕರ್ ಕೆ.ಪಿ. ನೇತೃತ್ವದಲ್ಲಿ ಐದು ತಂಡ ರಚನೆ ಮಾಡಲಾಗಿದ್ದು. ಗಗನ ಸಖಿ ಕೆಲಸ ನಿರ್ವಹಿಸುತ್ತಿದ್ದ ಏರ್ ಐಂಡಿಯಾದ ಮಂಗಳೂರಿನ ಕಚೇರಿ, ಹಾಗೂ ಅಲ್ಲಿನ ಸಿಬ್ಬಂದಿಗಳ ಮಾಹಿತಿ ಕಲೆಹಾಕುತ್ತಿದ್ದಾರೆ. ಇನ್ನೊಂದು ತಂಡ ಕಳೆದ ಕೆಲವು ತಿಂಗಳ ಹಿಂದೆ ನೇಜಾರಿನ ಮನೆಯಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ ಸ್ನೇಹಿತರ ಮಾಹಿತಿ ಕಲೆಹಾಕುತ್ತಿದ್ದಾರೆ.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ, ವಿಧಿವಿಜ್ಞಾನ ಪ್ರಯೋಗಲಾಯದ ಪರಿಣಿತರು ಆಗಮಿಸಿ ತನಿಖೆ ಚುರುಕುಗೊಳಿಸಿದ್ದಾರೆ.