ಪರಸ್ಪರ ಶಾಂತಿ ಸೌಹಾರ್ದತೆ ಸಾರಲು ಅನ್ನಸಂತರ್ಪಣೆ ಒಂದು ಉತ್ತಮ ಮಾರ್ಗ- ವಂ|ಸ್ಟ್ಯಾನಿ ಬಿ. ಲೋಬೋ

ಉಡುಪಿ: ಕಟಪಾಡಿ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಚರ್ಚ್ ಇದರ ಅಮೃತಮಹೋತ್ಸವ ಆಚರಣೆಯ ಪ್ರಯುಕ್ತ ಶನಿವಾರ ಚರ್ಚಿನ ಆವರಣದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದರು.

ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ಬಿ ಲೋಬೋ ಸಾರ್ವಜನಿಕ ಅನ್ನಸಂತರ್ಪಣೆಯ ಆಶೀರ್ವಚನ ನೆರವೇರಿಸಿ ಶುಭಹಾರೈಸಿದರು.

ಬಳಿಕ ಮಾತನಾಡಿದ ಅವರು ದೀಪಾವಳಿಯ ಸಂದರ್ಭದಲ್ಲಿ ಅಮೃತಮಹೋತ್ಸವದ ಸಂಭ್ರದಲ್ಲಿರುವ ಕಟಪಾಡಿ ಚರ್ಚ್ ಆಯೋಜಿಸಿರುವ ಸಾರ್ವಜನಿಕ ಅನ್ನಸಂತರ್ಪಣೆ ಪರಸ್ಪರ ಶಾಂತಿ ಸೌಹಾರ್ದತೆ ಮತ್ತು ಪ್ರೀತಿಯನ್ನು ಸಾರಲು ಇರುವ ಒಂದು ಉತ್ತಮ ಮಾರ್ಗವಾಗಿದೆ. ಈ ಮೂಲಕ ಪ್ರತಿಯೊಬ್ಬರು ಸಹಬಾಳ್ವೆಯ ಬದುಕನ್ನು ಬದುಕಲು ಪ್ರೇರೆಪಿಸಲಿ ಎಂದರು.

ಸಾರ್ವಜನಿಕ ಅನ್ನ ಸಂತರ್ಪಣೆಯ ಪ್ರಯುಕ್ತವಾಗಿ ಶುಕ್ರವಾರ ಸರ್ವಧರ್ಮಿಯರ ಸಹಭಾಗಿತ್ವದಲ್ಲಿ ಹೊರೆಕಾಣಿಕೆ ಮೆರವಣಿಗೆ ಜರುಗಿತ್ತು. ಹೊರೆಕಾಣಿಕೆ ಮೆರವಣಿಗೆಯಲ್ಲಿ ಉಡುಪಿ ವಲಯದ ವಿವಿಧ ಚರ್ಚುಗಳು, ಕಟಪಾಡಿ ವಿಶ್ವನಾಥ ಕ್ಷೇತ್ರ, ಲಯನ್ಸ್ ಕ್ಲಬ್, ಮಣಿಪುರ ಸಿಎಸ್ಐ ಚರ್ಚು, ಕಟಪಾಡಿ ಚರ್ಚಿನ ವಿವಿಧ ವಾಳೆಗಳು, ನವೋದಯ ಸ್ವಸಹಾಯ ಸಂಘದ ಸದಸ್ಯರು ಹಸಿರು ಹೊರೆಕಾಣಿಕೆಯನ್ನು ಸಮರ್ಪಿಸಿದ್ದರು.

ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಚರ್ಚಿನ ಭಕ್ತಾದಿಗಳು, ಊರ ಪರ ಊರಿನ ಜನರು ಆಗಮಿಸಿ ಪ್ರಸಾದ ಭೋಜನವನ್ನು ಸ್ವೀಕರಿಸಿದರು.

ಕಟಪಾಡಿ ಚರ್ಚಿನ ಧರ್ಮಗುರು ವಂ|ರಾಜೇಶ್ ಪಸನ್ನಾ, ಕಟಪಾಡಿ ಹೋಲಿಕ್ರಾಸ್ ಸ್ಟೂಡೆಂಟ್ ಹೋಮ್ ಇದರ ನಿರ್ದೇಶಕರಾದ ವಂ|ರೋನ್ಸನ್ ಡಿಸೋಜಾ, ಕಟಪಾಡಿ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಬ್ರಾಯನ್ ಕೊರೆಯಾ, ಕಾರ್ಯದರ್ಶಿ ತೆರೆಸಾ ಲೋಬೊ, 20 ಆಯೋಗಗಳ ಸಂಚಾಲಕರಾಗಿ ಲುವಿಸ್ ಡಿಸಿಲ್ವಾ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!