ವಿಜಯೇಂದ್ರ ನೇಮಕ ಬಗ್ಗೆ ನನಗೆ ಗೊತ್ತೇ ಇರಲಿಲ್ಲ, ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿರಲಿಲ್ಲ: ಬಿ.ಎಸ್ ಯಡಿಯೂರಪ್ಪ

ಬೆಂಗಳೂರು: ಬಹಳ ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಬಿಜೆಪಿಗೆ ಸಂಬಂಧಪಟ್ಟಂತೆ ಬಹಳ ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದಾರೆ. ಸೂಕ್ತ ಸಮಯದಲ್ಲಿ ರಾಜ್ಯಾಧ್ಯಕ್ಷರ ನೇಮಕ ಮಾಡಿದ್ದಾರೆ. ವಿಜಯೇಂದ್ರ ನೇಮಕ ನಿರೀಕ್ಷೆಯಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಜಯೇಂದ್ರ ನೇಮಕದ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ನೀವು ಯಾರನ್ನು ಬೇಕಾದರೂ ಕೇಳಿ ನೋಡಿ, ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿ ಎಂದು ನಾನು ಒಂದು ದಿನವೂ ದೆಹಲಿಗೆ ಹೋಗಿ ಕೇಳಿರಲಿಲ್ಲ, ಹೈಕಮಾಂಡ್ ಮುಂದೆ ಮನವಿ ಮಾಡಿರಲಿಲ್ಲ. ಹಲವು ವಿಚಾರಗಳನ್ನು ಅಳೆದು ತೂಗಿ ಹೈಕಮಾಂಡ್ ಸರಿಯಾದ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ವೀರಶೈವ ಲಿಂಗಾಯತ ಸಮಾಜ ನಮ್ಮ ಜೊತೆಗಿದೆ, ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಸಮಾಜದ ಬೆಂಬಲ ಇನ್ನೂ ಹೆಚ್ಚು ಸಿಗಲಿದೆ. ಮುಂದಿನ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಅತಿಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿ ಅವರಿಗೆ ಒಳ್ಳೆಯ ಉಡುಗೊರೆ ಕೊಡಬೇಕೆಂಬುದು ನಮ್ಮ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ನಿಟ್ಟಿನಲ್ಲಿ ಇನ್ನಷ್ಟು ಕೆಲಸ ಮಾಡುವುದಾಗಿ ಯಡಿಯೂರಪ್ಪ ಹೇಳಿದರು.

ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಮಾಡಿದ್ದರಿಂದ ಪಕ್ಷದ ಕೆಲವು ಹಿರಿಯ ನಾಯಕರಿಗೆ ಇರಿಸುಮುರುಸಾಗಿದೆ ಎಂದು ಹೇಳಲಾಗುತ್ತಿತ್ತು. ವಿ ಸೋಮಣ್ಣ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದರು. ಇವರಿಬ್ಬರೂ ದೂರವಾಣಿ ಕರೆ ಮಾಡಿ ವಿಜಯೇಂದ್ರ ಅವರಿಗೆ ಶುಭಾಶಯ ಕೋರಿದ್ದಾರೆ ಎಂದು ತಿಳಿದುಬಂದಿದೆ. 

Leave a Reply

Your email address will not be published. Required fields are marked *

error: Content is protected !!