ದಯವಿಟ್ಟು ರಾಜ್ಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ: ಬಿಜೆಪಿ ಹೈಕಮಾಂಡ್ ಗೆ ಮಾಜಿ ಸಿಎಂ ಸದಾನಂದಗೌಡ ಮನವಿ

ಬೆಂಗಳೂರು:ರಾಜ್ಯ ಬಿಜೆಪಿ ನಾಯಕರನ್ನು ಅಸಡ್ಡೆಯಿಂದ ನೋಡುತ್ತಿರುವ ಬಿಜೆಪಿ ಹೈಕಮಾಂಡ್ ನ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ ಮತ್ತು ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಗೌಡ, ರಾಜ್ಯದಲ್ಲಿನ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಕೇಂದ್ರ ನಾಯಕರನ್ನು ಮನವಿ ಮಾಡಿಕೊಳ್ಳುವುದಾಗಿ ಹೇಳಿದರು. 

ವಿಧಾನಸಭಾ ಚುನಾವಣೆಯಲ್ಲಿ ಸೋತಿರಬಹುದು, ಆದರೆ, ಲೋಕಸಭಾ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸುವಂತೆ ಖಾತ್ರಿಪಡಿಸುತ್ತೇವೆ. ದಯವಿಟ್ಟು ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿ, ರಾಜ್ಯಕ್ಕೆ ಭೇಟಿ ನೀಡದಿರುವುದು ಮತ್ತು ವಿಪಕ್ಷ ನಾಯಕನನ್ನು ಆಯ್ಕೆ ಮಾಡದಿರುವ ನಿರ್ಧಾರ ಸರಿಯಲ್ಲ ಎಂದು ಸಮರ್ಥಿಸಿಕೊಂಡರು.

ಚುನಾವಣಾ ರಾಜಕೀಯದಿಂದ ನಿವೃತ್ತಿ ಕುರಿತು ಮಾತನಾಡಿದ ಗೌಡರು, ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ತಮ್ಮ ನಿರ್ಧಾರಕ್ಕೆ ಯಾರಿಂದಲೂ ಒತ್ತಡವಿಲ್ಲ ಎಂದರು. “ಹನುಮಂತನಂತೆ ನನ್ನ ಹೃದಯ ವನ್ನು ತೆರೆದು ತೋರಿಸಲು ಸಾಧ್ಯವಿಲ್ಲ. ನಾನು ಸತ್ಯವನ್ನೇ ಹೇಳಿದ್ದೇನೆ ಮತ್ತು ನಾನು ಯಾವುದೇ ನಾಯಕರೊಂದಿ ಗೆ ಈ ವಿಷಯವನ್ನು ಚರ್ಚಿಸಿಲ್ಲ ಎಂದು ಸ್ಪಷ್ಪಪಡಿಸಿದರು. 

“2024 ರಲ್ಲಿ ಚುನಾವಣೆಗೆ ಸ್ಪರ್ಧಿಸದಿರುವ ಬಗ್ಗೆ ಮಾತನಾಡಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸಬೇಕೆಂದು ಪಕ್ಷ ಮತ್ತು ಆರ್‌ಎಸ್‌ಎಸ್ ಬಯಸಿದೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಮತ್ತು ಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ನಾನು ಎಂದಿಗೂ ರಾಜಕೀಯದಲ್ಲಿ ದಡ್ಡನಲ್ಲ” ಎಂದು ಅವರು ವಿವರಿಸಿದರು.

ನಿವೃತ್ತಿಯಾಗುವಂತೆ ಪಕ್ಷದ ವರಿಷ್ಠರು ನೇರವಾಗಿಯೇ ಸೂಚಿಸಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆ ಕುರಿತು ಮಾತನಾಡಿದ ಗೌಡರು, ಯಡಿಯೂರಪ್ಪ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದ್ದು, ಚುನಾವಣೆಗೆ ಸ್ಪರ್ಧಿಸದಂತೆ ತಮ್ಮ ಮೇಲೆ ಯಾವುದೇ ಒತ್ತಡವಿಲ್ಲ ಎಂದು ತಿಳಿಸಿದರು. 

ಸದಾನಂದ ಗೌಡರು ಯಾವುದೇ ನಾಯಕರ ಗುಲಾಮರಲ್ಲ. ಒತ್ತಡದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ ಮತ್ತು ನನ್ನ ಜವಾಬ್ದಾರಿಯನ್ನು ಅರಿತುಕೊಂಡಿದ್ದೇನೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 32 ಲಕ್ಷ ಮತದಾರರಿದ್ದಾರೆ. ಯಾವುದೇ ಮತದಾರ ನನ್ನದು ತಪ್ಪು ಎಂದು ಹೇಳಿದರೆ ಬೆಂಗಳೂರು ನಗರ ಬಿಟ್ಟು ಹೋಗುತ್ತೇನೆ ಎಂದು ಸವಾಲು ಹಾಕಿದರು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಪಕ್ಷದ ನಿರ್ಧಾರದ ಬಗ್ಗೆ ಗೌಡರು ಈ ಹಿಂದೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!