ಸಿಎಂ ಯಡಿಯೂರಪ್ಪ ಈಗ ಮೊಮ್ಮಕ್ಕಳ ಹೆಸರಲ್ಲಿ ಹಣ ಪಡೆಯುತ್ತಿದ್ದಾರೆ: ಬೇಳೂರು ಗೋಪಾಲಕೃಷ್ಣ
ಶಿವಮೊಗ್ಗ (ಸೆ.29): ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಅವರ ಮಕ್ಕಳು ಸರ್ಕಾರ ಭ್ರಷ್ಟಾಚಾರಲ್ಲಿ ಕಾರ್ಪೋರೇಟ್ ಸಂಸ್ಥೆಗಳ ಗುಲಾಮರಾಗಿದ್ದಾರೆ. ಈ ಹಿಂದೆ ಚೆಕ್ ಮೂಲಕ ಹಣ ಪಡೆಯುತ್ತಿದ್ದರು. ಈಗ ಆರ್ಟಿ ಜಿಎಸ್ ಮೂಲಕ ಮೊಮ್ಮಕ್ಕಳ ಹೆಸರಲ್ಲಿ ಹಣ ಪಡೆಯುತ್ತಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಯಡಿಯೂರಪ್ಪ 21 ದಿನಗಳ ಕಾಲ ಜೈಲು ವಾಸ ಎದುರಿಸಿದರೂ ಪಶ್ಚತ್ತಾಪ ಇಲ್ಲ. ಈ ರಾಜ್ಯವನ್ನು ಕೊಳ್ಳೆ ಹೊಡೆಯಲು ಹೊರಟಿದ್ದಾರೆ ಎಂದು ಹೇಳಿದರು.
ಈ ರಾಜ್ಯವನ್ನೇ ಕೊಳ್ಳೆ ಹೊಡೆಯಲು ಮಕ್ಕಳು ಮೊಮ್ಮಕ್ಕಳು ಸೇರಿಕೊಂಡಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ತರುವುದಾಗಿ ಹೇಳಿದ್ದರು. ಆದರೆ ಇದರ ಬಗ್ಗೆ ಇದುವರೆಗೂ ಚಕಾರವೆತ್ತಿಲ್ಲ. ಆಗಾಗ ರಾಜ್ಯದಲ್ಲಿ ಕೋಮು ಗಲಭೆ ಉಂಟಾಗಲಿ ಎನ್ನುವುದೇ ಅವರ ಉದ್ದೇಶ ಎಂದರು.
ಸಚಿವ ಕೆ ಎಸ್ ಈಶ್ವರಪ್ಪ ಕೂಡ ಗೋಹತ್ಯೆ ನಿಷೇಧ ಬಗ್ಗೆ ಮಾತನಾಡಿದ್ದವರು, ಈಗ ಮಾತೇ ಆಡುತ್ತಿಲ್ಲ . ನಗರಸಭೆ,ಪಟ್ಟಣ ಪಂಚಾಯತಿ ಚುನಾವಣೆ ನಡೆದು ವರ್ಷವಾದರೂ ಗೆದ್ದವರಿಗೆ ಅಧಿಕಾರ ಸಿಕ್ಕಿಲ್ಲ. ಇದೊಂದು ಕುರುಡು ಸರ್ಕಾರ ಎಂದು ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಪ್ರವಾಹ ಬಂದು ಸಾಯಲಿ, ಕೊರೊನಾ ಬಂದು ಸಾಯಲಿ ಅದರೆ ತಮಗೆ ಬರಬೇಕಾದದ್ದು ಬರಲಿ ಎಂಬ ಮನೋಭಾವದ ಸರ್ಕಾರ ಇದು. ಯಡಿಯೂರಪ್ಪ ರೈತ ನಾಯಕರೇ ಅಲ್ಲ , ಅವರು ರೈತ ಬೆಳೆದ ನಿಂಬೆಹಣ್ಣು ಮಾರಲು ಮಂಡ್ಯದಿಂದ ಶಿಕಾರಿಪುರಕ್ಕೆ ಬಂದವರಿಗೆ ರೈತ ನಾಯಕರೆಂದು ಹೇಳಿಕೊಳ್ಳುವ ಯೋಗ್ಯತೆ ಇಲ್ಲ.
ಯಡಿಯೂರಪ್ಪ ಅವರ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಗೋಪಾಲಕೃಷ್ಣ ಹೇಳಿದರು.