ರಾಜತಾಂತ್ರಿಕ ವಿವಾದ- ಕೆನಡಾದಲ್ಲಿಯ ಭಾರತೀಯರಿಗೆ ಪ್ರಯಾಣ ಸಲಹಾಸೂಚಿ ಹೊರಡಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ: ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ ಸಿಂಗ್ ನಿಜ್ಜರ್ ಹತ್ಯೆಯ ಕುರಿತು ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೇ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ವು ಕೆನಡಾದಲ್ಲಿರುವ ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳನ್ನು ‘ಅತ್ಯಂತ ಎಚ್ಚರಿಕೆಯನ್ನು ವಹಿಸುವಂತೆ’ ಆಗ್ರಹಿಸಿ ಬುಧವಾರ ಸಲಹಾಸೂಚಿಯೊಂದನ್ನು ಹೊರಡಿಸಿದೆ.
ಕೆನಡಾದಲ್ಲಿ ಹೆಚ್ಚುತ್ತಿರುವ ಭಾರತ ವಿರೋಧಿ ಚಟುವಟಿಕೆಗಳು ಹಾಗೂ ರಾಜಕೀಯ ಕೃಪಾಪೋಷಿತ ದ್ವೇಷಾಪರಾಧಗಳು ಮತ್ತು ಕ್ರಿಮಿನಲ್ ಹಿಂಸಾಚಾರದ ಹಿನ್ನೆಲೆಯಲ್ಲಿ ಅಲ್ಲಿರುವ ಎಲ್ಲ ಭಾರತೀಯ ಪ್ರಜೆಗಳು ಮತ್ತು ಪ್ರಯಾಣಿಸಲು ಆಲೋಚಿಸುತ್ತಿರುವವರು ಅತ್ಯಂತ ಜಾಗರೂಕರಾಗಿರುವಂತೆ ಸಲಹಾಸೂಚಿ ಯಲ್ಲಿ ಆಗ್ರಹಿಸಲಾಗಿದ್ದು, ಇತ್ತೀಚಿಗೆ ಬೆದರಿಕೆಗಳು, ವಿಶೇಷವಾಗಿ ಭಾರತೀಯ ರಾಜತಾಂತ್ರಿಕರು ಮತ್ತು ಭಾರತ ವಿರೋಧಿ ಅಜೆಂಡಾವನ್ನು ಪ್ರತಿರೋಧಿಸುವ ಭಾರತೀಯ ಸಮುದಾಯದ ವರ್ಗಗಳನ್ನು ಗುರಿಯಾಗಿಸಿಕೊಂಡಿವೆ. ಆದ್ದರಿಂದ ಕೆನಡಾದಲ್ಲಿ ಇಂತಹ ಘಟನೆಗಳಿಗೆ ಸಾಕ್ಷಿಯಾಗಿರುವ ಪ್ರದೇಶಗಳು ಮತ್ತು ಸಂಭಾವ್ಯ ತಾಣಗಳಿಗೆ ಪ್ರಯಾಣಿಸದಂತೆ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಲಾಗಿದೆ.
ಪರಸ್ಪರರ ರಾಜತಾಂತ್ರಿಕರ ಉಚ್ಚಾಟನೆಯ ಬಳಿಕ ಉಭಯ ದೇಶಗಳ ನಡುವೆ ಬಿಕ್ಕಟ್ಟು ತೀವ್ರಗೊಂಡಿರುವ ನಡುವೆಯೇ ಸರಕಾರದ ಸಲಹಾಸೂಚಿ ಹೊರಬಿದ್ದಿದೆ.