ಶ್ರೀಲಂಕಾ ವಿರುದ್ಧ ಭಾರತಕ್ಕೆ ಸುಲಭ ಜಯ: 8ನೇ ಬಾರಿ ಏಶ್ಯಕಪ್ ಮುಡಿಗೇರಿಸಿಕೊಂಡ ಭಾರತ
ಕೊಲಂಬೊ: ಭಾರತದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಮಾರಕ ಬೌಲಿಂಗ್(6-21)ದಾಳಿ ಹಾಗೂ ಶುಭಮನ್ ಗಿಲ್(ಔಟಾಗದೆ 27) ಹಾಗೂ ಇಶಾನ್ ಕಿಶನ್(ಔಟಾಗದೆ 23 ರನ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಏಶ್ಯಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ಕ್ರಿಕೆಟ್ ತಂಡದ ವಿರುದ್ಧ 10 ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿದೆ. ಈ ಮೂಲಕ ದಾಖಲೆ 8ನೇ ಬಾರಿ ಏಶ್ಯಕಪ್‌ನ್ನು ಜಯಿಸಿದೆ.
ಏಶ್ಯಕಪ್‌ನ್ನು ಗೆದ್ದುಕೊಂಡಿರುವ ಭಾರತ ಐದು ವರ್ಷಗಳಿಂದ ಕಾಡುತ್ತಿದ್ದ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡಿದೆ. 2018ರಲ್ಲಿ ಏಶ್ಯಕಪನ್ನು ಗೆದ್ದ ನಂತರ ಭಾರತವು ಪ್ರಮುಖ ಪ್ರಶಸ್ತಿಯನ್ನು ಗೆದ್ದಿರಲಿಲ್ಲ.
ಇಂದು ಫೈನಲ್ ಪಂದ್ಯ ಗೆಲ್ಲಲು 51 ರನ್ ಸುಲಭ ಗುರಿ ಪಡೆದಿದ್ದ ಭಾರತ 6.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 51 ರನ್ ಗಳಿಸಿ ಗೆಲುವಿನ ದಡ ಸೇರಿತು. ಇದಕ್ಕೂ ಮೊದಲು ಪ್ರೇಮದಾಸ ಸ್ಟೇಡಿಯಮ್‌ನಲ್ಲಿ ಟಾಸ್ ಜಯಿಸಿದ ಶ್ರೀಲಂಕಾದ ನಾಯಕ ದಸುನ್ ಶನಕ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಆದರೆ ಸಿರಾಜ್ ನೇತೃತ್ವದ ದಾಳಿಗೆ 2ನೇ ಕನಿಷ್ಠ ಮೊತ್ತಕ್ಕೆ (50 ರನ್)ಆಲೌಟಾಯಿತು. ಭಾರತವು ಇದೇ ಮೊದಲ ಬಾರಿ ಎದುರಾಳಿ ತಂಡವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕಿದ ಸಾಧನೆ ಮಾಡಿತು. ಸಿರಾಜ್ ಒಂದೇ ಓವರ್‌ನಲ್ಲಿ 4 ವಿಕೆಟ್‌ಗಳನ್ನು ಕಬಳಿಸಿ ಶ್ರೀಲಂಕಾದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಹಾರ್ದಿಕ್ ಪಾಂಡ್ಯ(3-3) ಮೂರು ವಿಕೆಟ್ ಪಡೆದರು.
ಲಂಕಾ ಪರ ಬ್ಯಾಟಿಂಗ್ ನಲ್ಲಿ ಕುಶಾಲ್ ಮೆಂಡಿಸ್ 17 ಮತ್ತು ದುಶನ್ ಹೇಮಂತ್ 13 ರನ್ ಗಳಿಸಿದ್ದು ಬಿಟ್ಟರೆ ಮತ್ಯಾರು ಎರಡಂಕಿ ದಾಟಲಿಲ್ಲ. ಭಾರತ ಪರ ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್ 6, ಹಾರ್ದಿಕ್ ಪಾಂಡ್ಯ 3 ಮತ್ತು ಜಸ್ ಪ್ರೀತ್ ಬುಮ್ರಾ 1 ವಿಕೆಟ್ ಪಡೆದಿದ್ದಾರೆ.